ನವದೆಹಲಿ : ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಭೀತಿ ಹಿನ್ನೆಲೆ ಪ್ರತಿದಿನ 500ಕ್ಕಿಂತ ಹೆಚ್ಚಿನ ಯಾತ್ರಿಕರಿಗೆ ಪವಿತ್ರ ಅಮರನಾಥ ದೇಗುಲಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಗೊಂಡಿರುವ ಅಮರನಾಥ ಮತ್ತು ವೈಷ್ಣೋದೇವಿ ದೇಗುಲಗಳ ತೀರ್ಥಯಾತ್ರೆಗೆ ಸಂಬಂಧಿಸಿದಂತೆ, ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ, ಜಿತೇಂದ್ರ ಸಿಂಗ್ ಹಾಗೂ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಜಮ್ಮು-ಕಾಶ್ಮೀರದ ಅಧಿಕಾರಿಗಳು ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿ ಈ ಕುರಿತು ಚರ್ಚೆ ನಡೆಸಿದ್ದಾರೆ.
ಅಮರನಾಥ ಯಾತ್ರೆ ಜುಲೈ 21ರಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಹಿಮದಿಂದ ತುಂಬಿರುವುದರಿಂದ ಪಹಲ್ಗಂ ಮೂಲಕ ಹೋಗುವ ಮಾರ್ಗವನ್ನು ಇನ್ನೂ ತೆರವುಗೊಳಿಸಲಾಗಿಲ್ಲ. ಈ ವರ್ಷ ಬಾಲ್ಟಾಲ್ ಮಾರ್ಗದ ಮೂಲಕ ಮಾತ್ರ ತೀರ್ಥಯಾತ್ರೆಗೆ ಅವಕಾಶ ನೀಡಬಹುದು. ಆದರೆ, ಮುಂದಿನ ವಾರದಲ್ಲಿ ತೀರ್ಥಯಾತ್ರೆ ಮಾಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈಷ್ಣೋದೇವಿ ದೇಗುಲದ ವಿಷಯದಲ್ಲಿ ಜುಲೈ 31ರವರೆಗೆ ದೇವಾಲಯದ ಭೇಟಿಯನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಜನರಿಗೆ ಇಲ್ಲಿಗೆ ಮೊದಲ ಅವಕಾಶ ನೀಡುವಂತೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ. ನಂತರ, ಕೊರೊನಾ ವೈರಸ್ ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯದ ಹೊರಗಿನ ಜನರಿಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗ್ತಿದೆ.