ನವದೆಹಲಿ: ಕೊರೊನಾ ಹಿನ್ನೆಲೆ ಅಗತ್ಯ ಸೇವೆ ಹೊರತುಪಡಿಸಿ ಯಾವ ಚಟುವಟಿಕೆಗಳು ಕೂಡ ನಡೆಯುತ್ತಿಲ್ಲ. ಇದಕ್ಕೆ ಕ್ರೀಡೆ ಕೂಡ ಹೊರತೇನಿಲ್ಲ. ಈ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ವರ್ಷ ಯಾವುದೇ ಕ್ರೀಡಾಕೂಟ ಆಯೋಜನೆ ಮಾಡಿದ್ರು ಜೀವಗಳನ್ನು ಅಪಾಯಕ್ಕೆ ತಳ್ಳಿದಂತೆ ಎಂದಿದ್ದಾರೆ.
ಕ್ರೀಡಾಕೂಟಗಳನ್ನು ಮತ್ತೇ ಆಯೋಜನೆ ಮಾಡಬೇಕೆಂದರೂ ಕನಿಷ್ಠ ಆರು ತಿಂಗಳವರೆಗೆ ಅಥವಾ ಒಂಬತ್ತು ತಿಂಗಳ ತನಕ ಆಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಕ್ರಿಕೆಟ್, ಫುಟ್ಬಾಲ್, ಟೆನಿಸ್, ರೇಸಿಂಗ್ ನಿಂದ ಹಿಡಿದು ಒಲಿಂಪಿಕ್ಸ್ ವರೆಗೆ ಎಲ್ಲಾ ಕ್ರೀಡೆಗಳು ಇದಕ್ಕೆ ಅನ್ವಯವಾಗುತ್ತವೆ.
ಕ್ರೀಡೆಯು ಅದ್ಭುತವಾಗಿದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ, ಈ ಸಮಯದಲ್ಲಿ ನಮ್ಮ ಜೀವದ ಬಗ್ಗೆ ಗಮನಹರಿಸಬೇಕು. ಹಾಗೂ ಹೆಚ್ಚಿನ ಜನಸಂದಣಿಯನ್ನು ಆಕರ್ಷಿಸುವ ಕ್ರೀಡಾಕೂಟಗಳು ದೊಡ್ಡ ಅನಾಹುತ ಉಂಟುಮಾಡುತ್ತವೆ ಎಂದು ಮ್ಯಾಕ್ಸ್ ಆಸ್ಪತ್ರೆಯ ಪ್ರಸಿದ್ಧ ಕ್ರೀಡಾ ಗಾಯ ಶಸ್ತ್ರಚಿಕಿತ್ಸಕ ಆಕಾಶ್ ಸಭರ್ವಾಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕ್ರೀಡೆಯು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಿದರೂ ಸಹ ಕೆಲ ಸಮಯದವರೆಗೆ ಸಂಪೂರ್ಣವಾಗಿ ತಡೆಹಿಡಿಯಬೇಕು. ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತಂದ ನಂತರ ವಿವಿಧ ಲೀಗ್‌ಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರು ಪಂದ್ಯಾವಳಿಗಳನ್ನು ಮತ್ತು ಚಾಂಪಿಯನ್‌ಶಿಪ್‌ಗಳನ್ನು ಪುನರಾರಂಭಿಸಲು ಮುಂದಾಗುತ್ತಾರೆ. ಆ ಸಮಯದಲ್ಲಿ ಪ್ರೇಕ್ಷಕರಿಲ್ಲದೇ ಆತಿಥ್ಯ ವಹಿಸುವುದು ಸೂಕ್ತವಾದುದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ನಂತಹ ದೊಡ್ಡ ಆಟಗಳಲ್ಲಿ ದೊಡ್ಡಮೊತ್ತದ ಹಣವನ್ನು ತೊಡಗಿಸಲಾಗುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಇದಕ್ಕೆ ಬೇರೆ ಆಯ್ಕೆಗಳಿಲ್ಲ. ಒಲಿಂಪಿಕ್ಸ್ ಅನ್ನು ಸಹ ಮುಂದೂಡಲಾಗಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿದ ನಂತರ ಈವೆಂಟ್ನ್ನು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ ಎಂದು ಬಿಸಿಸಿಐ ಕೂಡ ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳಿಗೆ ತಿಳಿಸಿದೆ ಎಂದು ಸಭರ್ವಾಲ್ ಹೇಳಲಿದ್ದಾರೆ.
ರಾಜಧಾನಿಯ ಉನ್ನತ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ಸರ್ ಗಂಗಾ ರಾಮ್ ಆಸ್ಪತ್ರೆಯ ಕ್ರೀಡಾ ವೈದ್ಯ ಡಾ.ಅಶಿಸ್ ಆಚಾರ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕನಿಷ್ಠ ಆರು ತಿಂಗಳವರೆಗಾದರೂ ಆಟಗಳನ್ನು ನಡೆಸಬಾರದು ಎಂದು ಹೇಳಿದ್ದಾರೆ. ಕ್ರೀಡೆಗಳಿಗೆ ಈಗ ಕಡಿಮೆ ಆದ್ಯತೆ ಇದೆ. ಜನರು ತೊಂದರೆಗೊಳಗಾಗದಂತೆ ಗಮನ ಹರಿಸಬೇಕು. ಮುಂದಿನ ಮೂರರಿಂದ ಆರು ತಿಂಗಳವರೆಗಾದರೂ ಕ್ರೀಡೆಗಳನ್ನು ನಡೆಸದಿರುವುದು ಒಳ್ಳೆಯದು ಎಂದಿದ್ದಾರೆ.
ಗುರುಗ್ರಾಮ್ನ ಮೆಡಂತಾ ಆಸ್ಪತ್ರೆಯ ಸಾಂಕ್ರಾಮಿಕ ರೋಗ ತಜ್ಞ ಡಾ. ನೇಹಾ ಗುಪ್ತಾ ಅವರು ಸಭರ್ವಾಲ್ ಆಚಾರ್ಯರ ಹೇಳಿಕೆಯನ್ನು ಸಮ್ಮತಿಸಿದ್ದಾರೆ. ಸೋಂಕು ಹೆಚ್ಟು ತೀವ್ರಗತಿಯಲ್ಲಿ ಎಲ್ಲರನ್ನೂ ವ್ಯಾಪಿಸುತ್ತಿದೆ ಎಂದು ನಾವು ತಿಳಿದಿದ್ದೇವೆ. ಆದ್ದರಿಂದ ಪರಿಸ್ಥಿತಿ ಒಂದು ಹಂತಕ್ಕೆ ಬಂದ ನಂತರ ಕ್ರೀಡಾಕೂಟಗಳನ್ನು ನಡೆಸಬೇಕು. ಅಲ್ಲಿವರೆಗೂ ಯಾವುದಕ್ಕೂ ಮುಂದಾಗಬಾರದು ಎಂದು ಗುಪ್ತಾ ಅಭಿಪ್ರಾಯಿಸಿದ್ದಾರೆ.
ದ್ವಾರಕಾದ ಮಣಿಪಾಲ್ ಆಸ್ಪತ್ರೆಯ ಉಸಿರಾಟಕ್ಕೆ ಸಂಬಂಧಿಸಿದ ವೈದ್ಯ ಡಾ.ಪುನೀತ್ ಖನ್ನಾ ಅವರ ಆಲೋಚನೆ ಇದಕ್ಕಿಂತ ಭಿನ್ನವಾಗಿಲ್ಲ. ಕನಿಷ್ಠ ಮೂರರಿಂದ ಆರು ತಿಂಗಳವರೆಗೆ ಯಾವುದೇ ಕ್ರೀಡಾಕೂಟಗಳನ್ನು ಆಯೋಜಿಸದಿರುವುದು ಜಾಣತನ. ಇಲ್ಲದಿದ್ದರೆ ಇದರಿಂದ ಖಂಡಿತಾ ಅನಾಹುತ ಉಂಟಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭಾರತವು ಪ್ರಸ್ತುತ 11,500 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ಹೊಂದಿದ್ದು, 350 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ.