ನವದೆಹಲಿ: ಕೊರೊನಾ ವೈರಸ್ನಿಂದ ಉಂಟಾದ ಆರ್ಥಿಕ ಮತ್ತು ಆರೋಗ್ಯ ಬಿಕ್ಕಟ್ಟಿನಿಂದ ವಿಶ್ವದಾದ್ಯಂತ ಸುಮಾರು 7 ಮಿಲಿಯನ್ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಕಟಿಸಿದ ವಿಶ್ಲೇಷಣೆ ಹೇಳುತ್ತದೆ.
ವಿಶ್ಲೇಷಣೆಯ ಪ್ರಕಾರ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಶೇ.80ರಷ್ಟು ಉಪ-ಸಹಾರಾ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದವರಾಗಿದ್ದಾರೆ.
'ಕೋವಿಡ್-19 ಸಾಂಕ್ರಾಮಿಕವು ಪ್ರಪಂಚದಾದ್ಯಂತ ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಪೌಷ್ಠಿಕಾಂಶವನ್ನು ದುರ್ಬಲಗೊಳಿಸುತ್ತಿದೆ. ಇದರ ಪರಿಣಾಮ ಚಿಕ್ಕ ಮಕ್ಕಳ ಮೇಲೆ ಉಂಟಾಗುತ್ತಿದೆ. ಹೆಚ್ಚಿನ ಮಕ್ಕಳು ಮತ್ತು ಮಹಿಳೆಯರ ಆಹಾರದ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ' ಎಂದು ವಿಶ್ವಸಂಸ್ಥೆಯ ಡಬ್ಲ್ಯುಹೆಚ್‌ಒ, ವರ್ಲ್ಡ್ ಫುಡ್ ಪ್ರೋಗ್ರಾಂ, ಯುನಿಸೆಫ್ ಮತ್ತು ಎಫ್‌ಎಒ ಮುಖ್ಯಸ್ಥರು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ವಿಶ್ಲೇಷಣೆಯಲ್ಲಿ ತಿಳಿಸಿದ್ದಾರೆ.
ಸರಿಯಾಗಿ ಆಹಾರ ಪೂರೈಕೆಯನ್ನು ಮಾಡದಿರುವುದರಿಂದ ಮಕ್ಕಳ ಆಹಾರದ ಗುಣಮಟ್ಟವನ್ನು ತಗ್ಗಿಸಿದೆೆ. 'ಮನೆಯಲ್ಲಿ ಬಡತನ ಮತ್ತು ಆಹಾರದ ಅಭದ್ರತೆ ಇರುವುದರಿಂದ ಸರಿಯಾದ ಪ್ರಮಾಣದಲ್ಲಿ ಅಗತ್ಯ ಪೌಷ್ಟಿಕಾಂಶಯುಕ್ತ ಆಹಾರ ಸಿಗದಿರುವುದು ಮತ್ತು ಆಹಾರದ ಬೆಲೆ ಗಗನಕ್ಕೇರಿರುವುದರ ಪರಿಣಾಮ ಮಕ್ಕಳ ಆಹಾರದ ಗುಣಮಟ್ಟ ಕಡಿಮೆಯಾಗಿದೆ ಮತ್ತು ಅಪೌಷ್ಟಿಕತೆಯ ಪ್ರಮಾಣವು ಹೆಚ್ಚಾಗಿದೆ'.
ಅಪೌಷ್ಟಿಕತೆ ತುಂಬಾ ಅಪಾಯಕಾರಿಯಾಗಿದ್ದು, ಇದು ಮಾರಣಾಂತಿಕ ರೂಪವಾಗಿದೆ. ಇದು ಮಕ್ಕಳನ್ನು ತುಂಬಾ ತೆಳ್ಳಗೆ ಮತ್ತು ದುರ್ಬಲಗೊಳಿಸುತ್ತದೆ. ಅಲ್ಲದೇ ಅವರ ಬೆಳವಣಿಗೆಯನ್ನು ಕುಂಠಿತವಾಗಿಸುತ್ತದೆ ಎಂದು ವರದಿ ಹೇಳುತ್ತದೆ.
ತಜ್ಞರ ಪ್ರಕಾರ, ಕೋವಿಡ್-19ಕ್ಕಿಂತ ಮುಂಚೆಯೇ, ಐದು ವರ್ಷದೊಳಗಿನ 47 ದಶಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆಯಿದ್ದು, ಹೆಚ್ಚಿನವರು ಉಪ-ಸಹಾರಾ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತಿದ್ದರು. ಈಗ ಲಾಕ್‌ಡೌನ್ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ನಿರ್ಬಂಧದಿಂದ ಆಹಾರ ಸರಬರಾಜು ಸರಿಯಾಗಿ ಆಗದೇ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕವು ಲಕ್ಷಾಂತರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಈ ಮಕ್ಕಳನ್ನು ರಕ್ಷಿಸಲು ಏಜೆನ್ಸಿಗಳು ಕನಿಷ್ಟ 2.4 ಬಿಲಿಯನ್ ಹಣವನ್ನು ಇದಕ್ಕಾಗಿ ಮೀಸಲಿಡುವುದು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದು ವಿಶ್ಲೇಷಣೆಯಲ್ಲಿ ನಾಯಕರು ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕವು ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಇನ್ನೂ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಸ್ಟಂಟಿಂಗ್, ಮೈಕ್ರೋನ್ಯೂಟ್ರಿಯೆಂಟ್ ಕೊರತೆ ಮತ್ತು ಅಧಿಕ ತೂಕವನ್ನು ಒಳಗೊಂಡಿರುತ್ತದೆ. ಜಾಗತಿಕ ಸಮುದಾಯವು ಈಗ ಕಾರ್ಯನಿರ್ವಹಿಸಲು ವಿಫಲವಾದರೆ ಮಕ್ಕಳು, ಮಾನವ ಸಂಪತ್ತು ಮತ್ತು ರಾಷ್ಟ್ರೀಯ ಆರ್ಥಿಕತೆಗೆ ದೀರ್ಘಕಾಲೀನ ಪರಿಣಾಮಗಳು ಉಂಟಾಗುತ್ತವೆ ಎಂದು ಯುಎನ್ ಎಚ್ಚರಿಸಿದೆ.