ಗುನಾ (ಮಧ್ಯಪ್ರದೇಶ): ಮಧ್ಯಪ್ರದೇಶದ ಗುನಾ ನಗರದಲ್ಲಿ ಕಾಲೇಜೊಂದಕ್ಕೆ ಮಂಜೂರು ಮಾಡಿದ ಸರ್ಕಾರಿ ಜಮೀನಿನಿಂದ ತಮ್ಮನ್ನು ಹೊರಹಾಕುವುದನ್ನ ವಿರೋಧಿಸಿ ಪ್ರತಿಭಟನೆ ನಡೆಸಿದ್ಧ ದಂಪತಿ ಕೀಟನಾಶಕ ಸೇವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಆ ವ್ಯಕ್ತಿಗೆ ನಿರ್ದಯವಾಗಿ ಹೊಡೆದಿದ್ದಾರೆ. ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಂಪತಿಯ ಸ್ಥಿತಿ ಸ್ಥಿರವಾಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾಯಿಸಿದೆ.
ಪ್ರತಿಪಕ್ಷ ಕಾಂಗ್ರೆಸ್ ಈ ಘಟನೆಯನ್ನು ಖಂಡಿಸಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದೆ.
"ಭೂಮಿಯನ್ನು ಸರ್ಕಾರಿ ಮಾದರಿ ಕಾಲೇಜಿಗೆ ಮೀಸಲಿಡಲಾಗಿತ್ತು. ರಾಜ್‌ಕುಮಾರ್ ಅಹಿರ್ವಾರ್ (38) ಮತ್ತು ಅವರ ಪತ್ನಿ ಸಾವಿತ್ರಿ (35) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಭೂಮಿಯನ್ನು ಅತಿಕ್ರಮಣ ಮಾಡಿದ್ದ ವ್ಯಕ್ತಿ ಈ ದಂಪತಿಗೆ ಕೆಲಸ ನೀಡಿದ್ದರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮೀನನ್ನು ಖಾಲಿ ಮಾಡುವಂತೆ ಅಧಿಕಾರಿಗಳು ಕೇಳಿದಾಗ, ಅವರು ಭೂಮಿಯನ್ನು ಅತಿಕ್ರಮಣ ಮಾಡಿದವರ ಆಜ್ಞೆಯ ಮೇರೆಗೆ ಪ್ರತಿಭಟಿಸಿದ್ದರು ಮತ್ತು ಕೀಟನಾಶಕವನ್ನು ಸೇವಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಗೆ ಹೋಗಲು ಕೂಡಾ ಇಬ್ಬರೂ ನಿರಾಕರಿಸಿದರು. ಬಳಿಕ ಪೊಲೀಸರು ಬಲವಂತವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈಗ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.