ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಅದರ ನಿರ್ವಹಣೆಗಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಗುರುವಾರ ಸಭೆ ನಡೆಸಿದ್ದಾರೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳನ್ನು ನಿರ್ವಹಣೆ ಮಾಡಲು ಸರ್ಕಾರದ ಜೊತೆ ಖಾಸಗಿ ಅಸ್ಪತ್ರೆಗಳು ಪಾಲ್ಗೊಳ್ಳುವಂತೆ ತಿಳಿಸಲು ಗುರುವಾರ ಸಂಜೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾತುಕತೆ ನಡೆಸಿದ್ದಾರೆಂದು ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ ಬುಧವಾರದಿಂದಲೇ ಯುನಿವರ್ಸಲ್ ಸ್ಕ್ರೀನಿಂಗ್ ಪ್ರಾರಂಭಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ದೇಶದಲ್ಲಿ 29 ದೃಢೀಕೃತ ಕೋವಿಡ್ -19 ಪ್ರಕರಣಗಳಿದ್ದು, ಇದರಲ್ಲಿ ಕೇರಳದ ಮೂರು ಪ್ರಕರಣಗಳು ಗುಣಮುಖವಾಗಿದೆ. ಈಗಾಗಲೇ ಒಟ್ಟು 3,542 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವುಗಳಲ್ಲಿ 29 ಪ್ರಕರಣಗಳಲ್ಲಿ ನೆಗೆಟೀವ್ ಕಂಡು ಬಂದಿದೆ ಎಂದು ತಿಳಿಸಿದೆ.