ನವದೆಹಲಿ: ಕೊರೊನಾ ವೈರಾಣು ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿ ಸಂಪೂರ್ಣ ಸ್ತಬ್ದವಾಗಿದೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಎಲ್ಲಾ ವಿಚಾರಣೆಗಳನ್ನು ಸೋಮವಾರಕ್ಕೆ ಮುಂದೂಡಿದೆ. ಜೊತೆಗೆ ಯಾವುದೇ ವಿಚಾರಣೆ ಇದ್ದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ತಿಳಿಸಿದೆ.
ಸುಪ್ರೀಂ ಕೋರ್ಟ್ ಶನಿವಾರ ಸುತ್ತೋಲೆ ಹೊರಡಿಸಿದ್ದು, ಉನ್ನತ ನ್ಯಾಯಾಲಯವು ನ್ಯಾಯಾಲಯ 2, 8 ಮತ್ತು 14ರಲ್ಲಿ ನಿಗದಿತ ವಿಚಾರಣೆಯನ್ನು ರದ್ದುಗೊಳಿಸಿದೆ. ಜೊತೆಗೆ ಬುಧವಾರ ಇಬ್ಬರು ನ್ಯಾಯಾಧೀಶರನ್ನೊಳಗೊಂಡ ಒಂದು ನ್ಯಾಯಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇವಲ ತುರ್ತು ವಿಷಯಗಳನ್ನು ಮಾತ್ರ ವಿಚಾರಣೆ ನಡೆಸಲಿದೆ ಎಂದು ಉಲ್ಲೇಖಿಸಿದೆ.
ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಪಟ್ಟಿಯ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ಮತ್ತು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರ ನ್ಯಾಯಪೀಠವು ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರು ವಿಷಯಗಳನ್ನು ಕೈಗೆತ್ತಿಕೊಳ್ಳಲಿದ್ದು, ವಕೀಲರು ಬೇರೆ ಕೋಣೆಯಲ್ಲಿ ವಿಚಾರ ಮಂಡಿಸಬೇಕಾಗಿ ಕೋರಲಾಗಿದೆ. ನ್ಯಾಯಾಧೀಶರು ನ್ಯಾಯಾಲಯ 1ರಲ್ಲಿ ಕುಳಿತುಕೊಂಡು ಕಾರ್ಯ ನಿರ್ವಹಿಸಲಿದ್ದಾರೆ.
ಸಾಂಕ್ರಾಮಿಕ ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆ ಮಾರ್ಚ್ 31ರವರೆಗೆ ದೆಹಲಿ ಸಂಪೂರ್ಣ ಲಾಕ್ಡೌನ್ ಆಗಿರುತ್ತದೆ. ಈ ಹಿನ್ನೆಲೆ ಏಪ್ರಿಲ್ 4 ರವರೆಗೆ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದು ದೆಹಲಿ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಡ್ ಅಸೋಸಿಯೇಷನ್ (ಎಸ್ಸಿಒಎಆರ್ಎ) ತಿಳಿಸಿದೆ.