ಕೊವಿಡ್ -19 ಜಾಗತಿಕ ಸೋಂಕು ರೋಗದ ಹರಡುವಿಕೆಯನ್ನು ನಿಲ್ಲಿಸುವ ಮಾರ್ಗವೇನೋ ಬಹಳ ಸರಳವಾಗಿದೆ. ಅದನ್ನು ಈಗಾಗಲೇ ಲಕ್ಷ ಲಕ್ಷ ಬಾರಿ ಹೇಳಿಯಾಗಿದೆ. ನಿಮ್ಮ ಮೂಗು ಮತ್ತು ಬಾಯಿಗಳನ್ನು ಕರವಸ್ತ್ರ ಅಥವಾ ಟಿಶ್ಯೂನಿಂದ ಮುಚ್ಚಿಕೊಳ್ಳಿ, ಕಂಡಕಂಡಲ್ಲಿ ಉಗುಳಬೇಡಿ, ಆಗಾಗ ಕೈಯನ್ನು 20 ಸೆಕೆಂಡುಗಳ ಕಾಲ ಸೋಪಿನಿಂದ ತೊಳೆದುಕೊಳ್ಳುತ್ತಿರಿ; ನಿಮ್ಮ ಕೈಯಿಂದ ಕಣ್ಣು ಅಥವಾ ಮೂಗು ಅಥವಾ ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ; ಕೈ ಕುಲುಕಬೇಡಿ, ದೂರದಿಂದಲೇ ನಮಸ್ತೇ ಎಂದು ಹೇಳಿ; ಸಾಮಾಜಿಕ ಅಂತರ ;ಇತರರಿಂದ ಒಂದು ಮೀಟರ್ ಅಂತರ ಕಾಯ್ದುಕೊಳ್ಳಿ. ಇವೆಲ್ಲವೂ ಮೇಲ್ನೋಟಕ್ಕೆ ಬಹಳ ಸರಳ ಕ್ರಮಗಳು. ಇವು ನೂರು ವರ್ಷದ ಹಿಂದೆ 1918ರಲ್ಲಿ ಫ್ಲು ಸಾಂಕ್ರಾಮಿಕ ರೋಗ ಬಂದಾಗಿನಿಂದಲೂ ಹೇಳಿರುವ ಮುನ್ನೆಚ್ಚರಿಕೆಗಳು- ಇವುಗಳಲ್ಲಿ ಯಾವುದೂ ಹೊಸದಲ್ಲ, ಯಾವುದೂ ಸಂಕೀರ್ಣವಲ್ಲ, ಯಾವುದೂ ದುಬಾರಿಯಲ್ಲ…. ಆದರೆ ಜೀವನದಲ್ಲಿ “ಸರಳ” ಎಂದು ಕಾಣುವ ಯಾವುದೂ ‘ಮಾಡಲು ಸುಲಭವಾದ’ ಕೆಲಸಗಳಲ್ಲ. ಯಾಕೆ ಹೀಗೆ??
ಜಾಗತಿಕ ಮಟ್ಟದಲ್ಲಿ ಈ ಸೋಂಕು ರೋಗ ಹರಡತೊಡಗಿದಂದಿನಿಂದಲೂ ಮೀಡಿಯಾ, ಮೊಬೈಲ್ ರಿಂಗ್ ಟೋನ್ ಗಳು ಮತ್ತು ದೇಶದ ನಾಯಕರು ಕಳೆದ ಒಂದು ತಿಂಗಳಿಂದಲೂ ಹೇಳತೊಡಗಿದ್ದರೂ, ದಿನೇ ದಿನೇ ಸಾವುಗಳ ಸಂಖ್ಯೆ ಹೆಚ್ಚತೊಡಗಿದ್ದರೂ ನಮ್ಮ ಜನರ ವರ್ತನೆ ನೋಡಿದಾಗ ಮಾತ್ರ ಅದರಲ್ಲಿ ಯಾವುದೇ ವ್ಯತ್ಯಾಸ ನಮಗೆ ಕಾಣುತ್ತಿಲ್ಲ. ಬಯಲಿನಲ್ಲಿ ಜನರು ಮುಖಕ್ಕೆ ಕೈ ಅಡ್ಡ ಹಿಡಿದುಕೊಳ್ಳದೇ ಕೆಮ್ಮುತ್ತಿದ್ದಾರೆ, ರಸ್ತೆಯ ಮೇಲೆ ಎಲ್ಲಿ ಬೇಕೆಂದರಲ್ಲಿ ಉಗುಳುತ್ತಿದ್ದಾರೆ, ತಮ್ಮ ಕೈಯಿಂದ ಮುಖ ಮತ್ತು ಮೂಗುಗಳನ್ನು ಒರೆಸಿಕೊಳ್ಳುತ್ತಾರೆ, ಗುಂಪುಗೂಡಿ ನಿಲ್ಲುತ್ತಿದ್ದಾರೆ, ಕೈಕುಲುಕುತ್ತಾ, ಅಪ್ಪಿಕೊಳ್ಳುತ್ತಾ…ಇದ್ದಾರೆ. ಈ ಸೋಂಕು ರೋಗ ಕಾಣಿಸಿಕೊಂಡ ದೇಶಗಳಿಂದ ವಿಮಾನಗಳ ಮೂಲಕ ಬಂದವರು ಸಹ ತಲೆ ಕೆಡಿಸಿಕೊಳ್ಳದೇ ಪಾರ್ಟಿಗಳಲ್ಲಿ ಭಾಗವಹಿಸುತ್ತಾ ಹಾಯಾಗಿದ್ದಾರೆ. ಈ ಮಟ್ಟದ ಉದಾಸೀನ ವರ್ತನೆ ಯೇಕೆ? ಇದನ್ನು ಬದಲಿಸಲು ಏನು ಮಾಡಬೇಕು?
ನಮ್ಮ ವರ್ತನೆಗಳಲ್ಲಿ ಸರಳವೆಂದು ಕಾಣಿಸುವ ಕೆಲವ ಅಭ್ಯಾಸಗಳನ್ನು ಬದಲಿಸಿಕೊಳ್ಳುವುದು ಸುಲಭ ಸಾಧ್ಯವಾಗದಿಲು ಹಲವು ಕಾರಣಗಳಿವೆ:
ಮೊದಲನೆಯ ಕಾರಣವೇನೆಂದರೆ ಇವುಗಳು ಬಹುಕಾಲದಿಂದಲೂ ಬೇರು ಬಿಟ್ಟಿರುವ ವರ್ತನೆಗಳು. ಇನ್ನು ಕೈ ಕುಲುಕುವುದು, ಅಪ್ಪಿಕೊಳ‍್ಳುವುದು ಮುಂತಾದ ರೂಢಿಗಳು ಸ್ಥಳೀಯ ಸಂಸ್ಕೃತಿಯ ಭಾಗವಾಗಿರುತ್ತವೆ. ಇಂತಹ ವರ್ತನೆಗಳು ನಮಗೆ ಸಂತೋಷ ನೀಡುವ ಜೊತೆಗೆ ಒಂದು ಬಗೆಯ ಆಪ್ತಭಾವವನ್ನು ಮೂಡಿಸುತ್ತವೆ. ಕೆಮ್ಮುವುದು, ಸೀನುವುದು, ಉಗುಳುವ ವರ್ತನೆಗಳು ಸಹ ಜೈವಿಕ ಕಾರಣಗಳಿಂದ ಹಾಗೂ ನಾವಾಗಿಯೇ ರೂಢಿಸಿಕೊಂಡ ವರ್ತನೆಗಳಾಗಿರುತ್ತವೆ. ಅವು ನಮ್ಮ ಹವ್ಯಾಸಗಳ ಭಾಗವಾಗಿರುತ್ತದೆ- ಮತ್ತು ಯಾವುದೇ ಹವ್ಯಾಸವನ್ನಾಗಲೀ, ರೂಢಿ ಮಾಡಿಕೊಂಡ ವರ್ತನೆಯನ್ನಾಗಲೀ ಇಲ್ಲವೇ ಜೈವಿಕ ವರ್ತನೆಗಳನ್ನಾಗಲೀ ಬದಲಿಸಿಕೊಳ್ಳುವುದು ಸುಲಭ ಎಂದುಕೊಳ್ಳಬೇಡಿ. ಇವೆಲ್ಲ ನಮ್ಮ ಆಲೋಚನಾ ಮಟ್ಟದಲ್ಲಿ ನಡೆಯದೇ ಪ್ರತಿಕ್ರಿಯಾ ರೂಪದಲ್ಲಿ ಕಾಣಿಸಿಕೊಳ್ಳುವ ವರ್ತನೆಗಳು.
ಎರಡನೆಯದಾಗಿ ಆರೋಗ್ಯ ಮನಃಶಾಸ್ತ್ರದಲ್ಲಿ ಒಂದು ಪರಿಕಲ್ಪನೆಯಿದೆ. ಅದರ ಪ್ರಕಾರ ಪ್ರತಿಯೊಬ್ಬರೂ ಸಹ ಖಾಯಿಲೆ ಅಥವಾ ಕೆಡುಕುಗಳು “ಸಾರ್ವಜನಿಕ”ರಿಗೆ ಅಥವಾ “ಇತರ” ವ್ಯಕ್ತಿಗಳಿಗೆ ಬಾಧಿಸುತ್ತವೆ ಎಂಚು ಯೋಚಿಸುತ್ತಾರಾಗಲೀ ತಮಗಾಗಲೀ ತಮ್ಮ ಕುಟುಂಬದವರಿಗಾಗಲೀ ಬಾಧಿಸುತ್ತವೆ ಎಂದು ಯೋಚಿಸುವುದಿಲ್ಲ. ಹೀಗಾಗಿ ಅವರ ನಂಬಿಕೆಯಲ್ಲಿ ತಾವು ಸಲಹೆಗಳನ್ನು ಕೇಳಿಕೊಳ್ಳಬಹುದು, ಬೇರೆಯವರಿಗೆ ಸಲಹೆ ನೀಡಲೂಬಹುದು; ಮಾತ್ರವಲ್ಲ ಅದೆಲ್ಲಾ ನಿಜವಾದ್ದು ಮತ್ತು ಉಪಯುಕ್ತ ಸಲಹೆ ಎಂದೂ ಸಹ ಮನಸ್ಸಿನಲ್ಲಿ ಅಂದುಕೊಳ್ಳಬಹುದು; ಆದರೆ ಅದನ್ನು ಆಚರಿಸುವ ಅಗತ್ಯ ಮಾತ್ರ ತನಗೆ ಇರಬೇಕಿಲ್ಲ ಎಂದೇ ಆ ವ್ಯಕ್ತಿ ಭಾವಿಸಿಕೊಂಡಿರುತ್ತಾನೆ. ಹೀಗಾಗಿ ರೂಢಿಸಿಕೊಂಡು ಬಂದ ಅಭ್ಯಾಸಗಳನ್ನು ಬದಲಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ.
ಮೂರನೆಯದಾಗಿ, ಹಲವು ಸರಳ ವಿಷಯಗಳು ಸುಲಭವಾಗಿ ಲಭ್ಯವಾಗುವುದಿಲ್ಲ. ಉದಾಹರಣೆಗೆ ಆಗಾಗ ಬಿಟ್ಟೂಬಿಡದೇ ಕೈಗಳನ್ನು 20 ಸೆಕೆಂಡುಗಳ ಕಾಲ ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳುವ ವಿಷಯವನ್ನೇ ತೆಗೆದುಕೊಳ್ಳಿ. ಭಾರತದಲ್ಲಿನ ಹಲಾವಾರು ಸ್ಥಳಗಳಲ್ಲಿ- ಬೀದಿಗಳು, ಸರ್ಕಾರಿ ಅಧಿಕಾರಿಗಳ ಕಚೇರಿಗಳನ್ನೂ ಸೇರಿಕೊಂಡಂತೆ ಕೆಲಸದ ಕಚೇರಿಗಳು, ರೈಲು ಮತ್ತು ಬಸ್ ನಿಲ್ದಾಣಗಳು, ಶಾಲೆ ಮತ್ತು ಕಾಲೇಜುಗಳು, ಹೊಟೆಲ್ ಹಾಗೂ ಶೌಚಾಲಯಗಳಲ್ಲಿ ಕೂಡಾ ಸೋಪು ಹಾಕಿ ಕೈ ತೊಳೆಯುವ ವ್ಯವಸ್ಥೆ ಇರುವುದಿಲ್ಲ. ಸಮರ್ಪಕವಾದ ನೀರಿನ ಪೂರೈಕೆಯೂ ಇರುವುದಿಲ್ಲ. ಅನೇಕ ಮನೆಗಳಲ್ಲಿ ಬಹಳ ಕಡಿಮೆ ಪ್ರಮಾಣದ ನೀರಿರುತ್ತದೆಯಲ್ಲದೇ ಸದಾ ಹರಿಯುವ ನೀರಾಗಲೀ ಸೋಪಾಗಲೀ ಇರುವುದಿಲ್ಲ. ಹಾಗೆಯೇ ನೀವು ವಾಚ್ ನೋಡಿಕೊಂಡು ಕೈತೊಳೆಯುವುದಾದರೆ 20 ಸೆಕೆಂಡ್ ಬಹಳ ದೀರ್ಘ ಸಮಯವಾಗಿ ಕಾಣುತ್ತದೆ. ನನ್ನ ಒಂದು ಅಂದಾಜಿನ ಪ್ರಕಾರ ಜನಸಂಖ್ಯೆಯ ಕೇವಲ ಶೇಕಡಾ 1ರಷ್ಟು ಜನರು ಸಹ ಇದನ್ನು ಮಾಡುತ್ತಿರುವುದಿಲ್ಲ. ಸರ್ಜನ್ ಗಳು ಮತ್ತು OCDಗಳಲ್ಲಿರುವ ಜನರು ಮಾತ್ರ ಅಪವಾದವಾಗಬಹುದು. ಸಾಮಾನ್ಯವಾಗಿ ಬಹುತೇಕರಿಗೆ ಕೈತೊಳೆಯುವುದು ಕೇವಲ 5-7 ಸೆಕೆಂಡುಗಳಷ್ಟೇ ಮಾಡುವ ಒಂದು ಶಾಸ್ತ್ರವಷ್ಟೆ. ಹೀಗಾಗಿ 20 ಸೆಕೆಂಡು ಕಾಲ ಕೈ ತೊಳೆಯಿರಿ ಎಂದು ಹೇಳುವುದೇನೋ ಸುಲಭ ಆದರೆ ಪಾಲಿಸುವುದು ಕಠಿಣ.
ಇನ್ನು ಕೈಯಿಂದ ಕಣ್ಣು, ಮೂಗು ಮತ್ತು ಬಾಯಿಗಳನ್ನು ಮುಟ್ಟಿಕೊಳ್ಳುವುದು ಸಹ ನಮ್ಮ ರೂಢಿಗತ ಅಭ್ಯಾಸವಾಗಿರುತ್ತದೆ. ಕೆಲವೊಮ್ಮೆ ಜೈವಿಕ ಅಗತ್ಯವೂ ಸಹ. ಕೋವಿಡ್-19 ಸಾಂಕ್ರಾಮಿಕ ಖಾಯಿಲೆ ಶುರುವಾದ ನಂತರ ಕಳೆದ ಒಂದು ತಿಂಗಳಲ್ಲಿ ಈ ವಿಷಯದಲ್ಲಿ ನಾನು ನನ್ನ ವರ್ತನೆಯನ್ನೇ ಗಮನಿಸುತ್ತಿದ್ದೇನಲ್ಲದೇ ಹಲವಾರು ಸಭೆಗಳಲ್ಲಿ ಭೇಟಿಯಾಗುವ ಇತರರ ವರ್ತನೆಗಳನ್ನೂ ಗಮನಿಸುತ್ತಾ ಬಂದಿದ್ದೇನೆ. ಎಲ್ಲರೂ ಪದೇ ಪದೇ ತಮ್ಮ ಕಣ್ಣು, ಮೂಗು ಅಥವಾ ಮುಖಗಳನ್ನು ಮುಟ್ಟಿಕೊಳ್ಳುವವರೇ ಆಗಿದ್ದೇವೆ. ಇದು ಸಹ ರೂಢಿಗತ ಅಭ್ಯಾಸ ಹಾಗೂ ಮೂಗಿನಲ್ಲಿ ಸಣ್ಣ ಕಡಿತವಾದರೆ, ಕಣ್ಣಿಗೆ ಏನೋ ಬಿದ್ದಂತಾದರೆ ಇಲ್ಲವೇ ಬೇಜಾರು ಕಳೆದುಕೊಳ್ಳಲು, ನಿದ್ದೆ ಬಂದಂತಾದಾಗ ಹೀಗೆ ನಾನಾ ಕಾರಣಗಳಿಗೆ ನಮಗೆ ತಿಳಿಯದೆಯೇ ಮುಟ್ಟಿಕೊಳ್ಳುತ್ತಾ ಇರುತ್ತೇವೆ. ಈ ಚಟಗಳನ್ನು ಬದಲಿಸಿಕೊಳ‍್ಳುವುದು ಅಷ್ಟೇ ಕಷ್ಟ. ಇವುಗಳಲ್ಲಿ ಕೆಲವಂತೂ ಎಷ್ಟೋ ಪೀಳಿಗೆಯಿಂದ ನಡೆದು ಬಂದಿದ್ದು ನಮ್ಮ ಕಣ್ಣು, ಮೂಗು ಮತ್ತು ಬಾಯಿಗಳನ್ನು ರಕ್ಷಿಸಿಕೊಳ್ಳಲು ಇಲ್ಲವೇ ಅವುಗಳು ಕೆಲಸ ಮಾಡುವಂತೆ ಮಾಡಲು ನಮ್ಮ ಜೀವ ವಿಕಾಸದಲ್ಲೇ ಮಿಳಿತಗೊಂಡಿರುತ್ತವೆ.
ನಂತರ, ಜನಜಂಗುಳಿ ಸೇರುವುದು, ಒಬ್ಬರ ಮೇಲೆ ಒಬ್ಬರು ಬೀಳುವುದು ಇವೆಲ್ಲಾ ನಮ್ಮ ಜನಸಂಖ್ಯೆಯಲ್ಲಿನ ಸಾಂದ್ರತೆಯಿಂದಲೂ ಆಗುತ್ತಿರುತ್ತದೆ, ಅನರ್ಹ ಮತ್ತು ಅವ್ಯವಸ್ಥಿತವಾಗಿ ಸಂಘಟಿತಗೊಂಡ ದೇಶದಲ್ಲಿ ಸಾಲಿನಲ್ಲಿ ಬಡಿಸಲ್ಪಡುವ ನಮ್ಮ ಸಂದಿಗ್ಧತೆ ಅಥವಾ ನಮಗೆ ಇಷ್ಟವಾದವರೊಂದಿಗೆ ಹತ್ತಿರವಿರಬೇಕೆನ್ನುವ ನಮ್ಮ ಜೈವಿಕ ಅಗತ್ಯತೆ ಇದಕ್ಕೆ ಕಾರಣವಿರಬಹುದು. ಭಾರತೀಯರು ಹೆಚ್ಚೆಚ್ಚು ಜನರನ್ನು ಅಣಿನೆರೆಸಿ ಸಂಭ್ರಮಿಸಲು ಬಯಸುತ್ತಾರೆ- ಸಾಮಾಜಿಕವಾಗಿ, ವಾಣಿಜ್ಯಾತ್ಮಕವಾಗಿ ಅಥವಾ ರಾಜಕೀಯವಾಗಿ ನಮ್ಮ ನಂಬಿಕೆಯೇನೆಂದರೆ ಹೆಚ್ಚಿನ ಸಂಖ್ಯೆಯೇ ನಮ್ಮ ಬಲ ಎಂಬುದು. ಒಂದು ರಾಷ್ಟ್ರವಾಗಿ ನಾವು ನಿಗದಿಪಡಿಸಿದ ಸಮಯ ವ್ಯವಸ್ಥೆಯಲ್ಲಿ ನಂಬಿಕೆ ಇಡುವವರಲ್ಲ- ಯಾವುದೇ ಸಾರ್ವಜನಿಕ ಕಚೇರಿಯಾಗಲೀ ಇಲ್ಲವೇ ಹಲವು ಖಾಸಗಿ ಅಧಿಕಾರಿಗಳಾಗಲೀ ಸಮಯದ ನಿಗದಿಯ ಪ್ರಕಾರ ಕೆಲಸ ಮಾಡುವಂತೆ ತೋರುವುದಿಲ್ಲ. ನಾವು ಯಾವುದೇ ಸೇವೆಗೆ ಸರತಿ ಸಾಲಿನಲ್ಲಿ ನಿಲ್ಲಬಯಸುತ್ತೇವಲ್ಲದೇ ನಮ್ಮ ಸಾಲು ನಿಲ್ಲುವ ಶಿಸ್ತಾಗಲೀ, ಸರತಿ ಸಾಲಿನಲ್ಲಿ ನಮ್ಮ ನ್ಯಾಯವಂತಿಯಾಗಲೀ ತೀರಾ ಕೆಳಮಟ್ಟದಲ್ಲಿವೆ. ಇದನ್ನು ಬದಲಿಸಿಕೊಳ್ಳೋದು ಸಹ ಸುಲಭವಲ್ಲ. ಇದಕ್ಕೆಲ್ಲಾ ಪ್ರಮುಖವಾದ ನೀತಿ ಸುಧಾರಣೆ ಮತ್ತು ಮನಸ್ಥಿತಿ ಬದಲಾವಣೆ ಅಗತ್ಯವಿದೆ. ನಾವು ವಿಕೇಂದ್ರೀಕರಣಗೊಳ್ಳಬೇಕಿದೆ, ಪ್ರಜಾತಾಂತ್ರೀಕರಣಗೊಳ್ಳಬೇಕಿದೆ ಮತ್ತು ಸೇವೆಗಳ ಪೂರೈಕೆಯನ್ನು ಹೆಚ್ಚಿಸಿಕೊಂಡು ಜನರು ಜನಜಂಗುಳಿಗಳಲ್ಲಿ ಸೇರದಂತೆ ಮಾಡಬೇಕಿದೆ.
ರೂಢಿ ಮಾಡಿಕೊಂಡ ಅಭ್ಯಾಸಗಳನ್ನು ಬಿಡಬೇಕೆಂದರೆ ಅದಕ್ಕೆ ತಕ್ಕನಾದ ಶಿಕ್ಷಣ, ಮಾಹಿತಿ ಮತ್ತು ಸಂವಹನ ಬೇಕಾಗುತ್ತದೆ- ಆದರೆ ಅದಷ್ಟೇ ಸಾಲುವುದಿಲ್ಲ. ಅದನ್ನು ಸಾಧಿಸಲು ಮತ್ತೆ ಮತ್ತೆ ಅಭ್ಯಾಸ ನಡೆಸಬೇಕಾಗುತ್ತದೆ- ಒಂದು ಡ್ರಿಲ್ ತರ. ಇದಕ್ಕೆ ಇತ್ತೀಚಿನ ಒಂದು ಉದಾಹರಣೆ ಹೇಳುತ್ತೇನೆ. ಹಲವು ನಗರಗಳಲ್ಲಿ ಸಾರ್ವಜನಿಕ ಗಾರ್ಡನ್ ಗಳಲ್ಲಿ ಜನರು ಸೇರುತ್ತಾರೆ ಹಾಗೂ ‘ನಗೆ ಕೂಟ”ಗಳನ್ನು ನಡೆಸುತ್ತಾರೆ- ಅವರು ಒಟ್ಟು ಸೇರಿಕೊಂಡು ಕೃತಕವಾಗಿ ನಗುವುದನ್ನು ಅಭ್ಯಾಸ ಮಾಡುತ್ತಾರೆ- ಇದು ಥೇಟ್ ಒಬ್ಬ ಡ್ರಿಲ್ ಮಾಸ್ಟರ್ ಬಂದು ಡ್ರಿಲ್ ಮಾಡಿಸುವಂತೆ ಇರುತ್ತದೆ. ಆ ನಗು ಕೂಟದ ಸಂಯೋಜಕ ನಗುವುದನ್ನು ಡ್ರಿಲ್ ನಂತೆಯೇ ಅಭ್ಯಾಸ ಮಾಡಿಸುತ್ತಾನೆ. ನಮ್ಮ ರೂಢಿಗತ ಅಭ್ಯಾಸಗಳನ್ನು ನಾವು ಬದಲಿಸಿಕೊಳ್ಳಬೇಕೆಂದರೆ ಇದೇ ರೀತಿ ಮಾಡಬೇಕಾಗುತ್ತದೆ- ಮೊಣಕೈ ಎತ್ತಿಕೊಂಡು ಇಲ್ಲವೇ ಕರವಸ್ತ್ರ ಇಟ್ಟುಕೊಂಡು ಕೆಮ್ಮುವುದು, ಮೂಗು ಆಥವಾ ಕಣ್ಣನ್ನು ಕರವಸ್ತ್ರದಿಂದ ಉಜ್ಜಿಕೊಳ್ಳುವುದು ಇವೆಲ್ಲವನ್ನೂ ಹಾಗೇ ಅಭ್ಯಾಸ ಮಾಡಬೇಕಾಗುತ್ತದೆ. ಒಬ್ಬರ ಜೊತೆ ಮಾತಾಡುವಾಗ ಒಂದು ಮೀಟರ್ ದೂರದಲ್ಲಿ ನಿಂತು ಮಾತಾಡುವುದು, ಕೈ ಕುಲುಕದೆ, ಅಪ್ಪಿಕೊಳ್ಳದೇ ಪರಸ್ಪರ ಮಾತಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.
“ಸ್ಮಾರ್ಟ್ ಸಿಟಿ” ಯೋಜನೆಯ ಭಾಗವಾಗಿ ನಾವು ಅಗತ್ಯ ಪ್ರಮಾಣದ ಶೌಚಾಲಯಗಳು ಹಾಗೂ ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳಲ್ಲಿ ಕೈ ತೊಳೆದುಕೊಳ್ಳಲು ಸಾಕಷ್ಟು ನೀರು ಮತ್ತು ಸೋಪುಗಳು ಲಭ್ಯವಾಗಿರುವಂತೆ ನೋಡಬೇಕಾಗುತ್ತದೆ. ನೀರಿನ ಟ್ಯಾಂಕುಗಳನ್ನು ಕಟ್ಟುವಾಗ ಸೋಪು ಹಚ್ಚಿಕೊಂಡು 20 ಸೆಕೆಂಡ್ ಕೈತೊಳೆಯಲು ಹಾಗೂ ಸೋಪು ಹಚ್ಚದೇ 2 ನಿಮಿಷ ಕೈತೊಳೆಯಲು ಅನುಕೂಲವಾಗುವಂತೆ ಲೆಕ್ಕಾಚಾರ ಹಾಕಬೇಕು.
ಅಂತಿಮವಾಗಿ ನಮ್ಮ ಸಾಮಾಜಿಕ ರಾಜಕೀಯ ಗ್ರಹಿಕೆಗಳು ಜನಜಂಗುಳಿಯ ಸಂಖ್ಯೆಯಿಂದ ಬೇರಾವುದಾದರೂ ರೀತಿಯಲ್ಲಿ ಸಂತೃಪ್ತಿ ಪಡೆಯುವ ರೀತಿಗೆ ಬದಲಾಗಬೇಕು. ಇದಕ್ಕೆ ಪ್ರಾಯಶಃ ಸಾಮಾಜಿಕ ಮಾಧ್ಯಮ ಸಹಾಯಕವಾಗಬಹುದೇನೋ. ಬಹುಶಃ ಇದು ಅತ್ಯಂತ ಕಠಿಣ ಸವಾಲೆನಿಸುತ್ತದೆ. ಇಲ್ಲಿ ಸಹ ಪ್ರಧಾನ ಮಂತ್ರಿಗಳ ಜನತಾ ಕರ್ಫ್ಯೂ ರೀತಿಯಲ್ಲಿ ನಾವೊಂದು ನೀತಿ ಸಂಹಿತೆಯನ್ನು ರೂಪಿಸಿಕೊಂಡು ಪಾರ್ಟಿಗಳಲ್ಲಿ ಹೆಚ್ಚೆಂದರೆ 300-400 ಜನರು ಹಾಗೂ ಸಾಮೂಹಿಕ ಸಭೆಗಳಲ್ಲಿ ಹೆಚ್ಚೆಂದರೆ 1000 ಜನರು ಮಾತ್ರವೇ ಸೇರುವಂತೆ ಮಾಡಬೇಕು.
ಹೀಗಾಗಿ ಕೋವಿಡ್ -19ರ ಜಾಗತಿಕ ಸೋಂಕು ರೋಗವನ್ನು ನಿಯಂತ್ರಿಸುವ ವಿಷಯ ನಾವಂದುಕೊಳ್ಳುವಷ್ಟು ಸಲೀಸಾಗಿಲ್ಲ. ಆದರೆ ಒಂದು ರಾಷ್ಟ್ರವಾಗಿ ಹಾಗೂ ಒಂದು ಸಮಾಜವಾಗಿ ನಾವು ಪ್ರಯತ್ನಿಸಿದರೆ ಅದು ಸಾಧ್ಯವಾಗಬಹುದು. ಇದು ಈ ಸೋಂಕು ರೋಗದ ವಿರುದ್ಧ ಹೋರಾಡಲು ಅತ್ಯಗತ್ಯವಾಗಿದೆ.
-ಡಾ. ದಿಲೀಪ್ ಮಾವಲಾಂಕಾರ್, ನಿರ್ದೇಶಕರು,ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಗಾಂಧಿನಗರ
(ಲೇಖಕರು IIPHGಯ ನಿರ್ದೇಶಕರು, ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ವೈಯಕ್ತಿಕ)