ಪಂಜಾಬ್: ಇಲ್ಲಿನ ಹೋಶಿಯಾರ್ಪುರದ ಇಬ್ಬರು ವ್ಯಕ್ತಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದಾಗಿ ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗುರುನಾನಕ್ ದೇವ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರಾಮನ್ ಶರ್ಮಾ, ಈ ಇಬ್ಬರೂ ರೋಗಿಗಳು ಮಾರ್ಚ್ 3 ರಂದು ಇಟಲಿಯಿಂದ ಅಮೃತಸರ್ ಏರ್ಪೋರ್ಟ್ಗೆ ಬಂದಿದ್ದರು. ತೀವ್ರವಾದ ಕೆಮ್ಮಿನಿಂದ ಬಳಲುತ್ತಿದ್ದ ಇವರನ್ನು ಇಲ್ಲಿಗೆ ದಾಖಲಿಸಿ, ರಕ್ತ ಪರೀಕ್ಷೆ ಮಾಡಲಾಗಿತ್ತು. ಇದೀಗ ಇವರು ಕೊರೊನಾ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದ್ದು, ಇಬ್ಬರನ್ನೂ ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿರಿಸಲಾಗಿದೆ. ಇನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಿಂದ ಅಂತಿಮ ಹಂತದ ವರದಿ ಬರಬೇಕಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಶುಕ್ರವಾರದ ವರೆಗೆ 31 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿತ್ತು. ಆದರೆ ಜಮ್ಮುವಿನಿಂದ ಇಟಲಿ ಹಾಗೂ ದಕ್ಷಿಣ ಕೊರಿಯಾಗೆ ಪ್ರಯಾಣ ಬೆಳೆಸಿ, ಭಾರತಕ್ಕೆ ವಾಪಸ್ ಆಗಿರುವ ಇಬ್ಬರು ವ್ಯಕ್ತಿಗಳಿಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಹೀಗಾಗಿ ಜಮ್ಮುಕಾಶ್ಮೀರದಲ್ಲಿ ಎರಡು, ಪಂಜಾಬ್ನಲ್ಲಿ ಎರಡು ಪ್ರಕರಣ ಸೇರಿ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾದಂತಾಗಿದೆ.