ಹೈದರಾಬಾದ್: ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಕೋವಿಡ್ ಹಿನ್ನೆಲೆ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಮುಂಬರುವ ದೀವಾವಳಿ ಆಚರಣೆ ವೇಳೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದಿದ್ದಲ್ಲಿ, ಮಾಲಿನ್ಯವನ್ನು ಕೊರೊನಾ ವೈರಸ್ ತನ್ನ ಮಾಧ್ಯಮವಾಗಿ ಬಳಸಿಕೊಂಡು ಉಸಿರಾಟ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಲಿದೆಯೆಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ವೇಳೆ ಬಳಸುವ ಪಟಾಕಿ ಹೊಗೆಯೊಂದಿಗೆ ಕೊರೊನಾ ಸೋಂಕು ನಮ್ಮ ದೇಹ ಪ್ರವೇಶಿಸಿದರೆ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಈ ಹಿನ್ನೆಲೆ, ದೆಹಲಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಲಾಗಿದೆ. ಆರೋಗ್ಯ ಸಮಸ್ಯೆ, ಅದರಲ್ಲೂ ಉಸಿರಾಟದ ತೊಂದರೆ ಇರುವವರು ಪಟಾಕಿ ಹೊಗೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ.
ಸೋಂಕು ಹರಡುವಿಕೆಗೆ ಅನುಕೂಲಕರ:
ದೀಪಾವಳಿ ಆಚರಣೆ ಸಂದರ್ಭ ಪಟಾಕಿ ಸಿಡಿಸುವುದರಿಂದ ಉಂಟಾಗುವ ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಕೋವಿಡ್‌ಗೆ ತುತ್ತಾಗಿ ಚೇತರಿಸಿಕೊಂಡವರ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಶೀತ ಹವಾಮಾನ ಮತ್ತು ಮಾಲಿನ್ಯವು ಕೋವಿಡ್ ರೋಗಲಕ್ಷಣಗಳನ್ನು ಹೊಂದಿರದವರ ಮೇಲೂ ಪರಿಣಾಮ ಬೀರುತ್ತದೆ. ತೆಲಂಗಾಣದಲ್ಲಿ ಈ ತಿಂಗಳ 1ರವರೆಗೆ 2,50,331 ಜನರಿಗೆ ಸೋಂಕು ತಗುಲಿದೆ. 19,890 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 17,135 ಮಂದಿ ಪ್ರತ್ಯೇಕ ವಾರ್ಡ್‌ಗಳಲ್ಲಿದ್ದಾರೆ. ಇವರೆಲ್ಲರೂ ಪಟಾಕಿ ಹೊಗೆಯಿಂದಾಗಿ ಅಂತಹ ಎಲ್ಲಾ ಜನರು ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಅಮೆರಿಕ, ಬ್ರಿಟನ್ ಮತ್ತು ಇಟಲಿಯಲ್ಲಿ ನಡೆದ ಅಧ್ಯಯನಗಳು:
ಕೋವಿಡ್‌ಗೆ ಬಲಿಯಾಗುತ್ತಿರುವವರ ಪ್ರಮಾಣ ಹೆಚ್ಚುವಾಗ ಇಲ್ಲಿನ ಆರೋಗ್ಯ ತಜ್ಞರು ಮಧ್ಯ ಮತ್ತು ದಕ್ಷಿಣ ಇಟಲಿಯ ಪ್ರದೇಶಗಳಿಗಿಂತ ಮಾಲಿನ್ಯ ಹೆಚ್ಚಿರುವ ಉತ್ತರ ಇಟಲಿಯಲ್ಲಿ ಸಾವಿನ ಸಂಖ್ಯೆ ಹೆಚ್ಚು ಎಂಬ ವಿಷಯವನ್ನು ಕಂಡುಕೊಂಡಿದ್ದಾರೆ. ಈ ಮಾಲಿನ್ಯವು ನೇರವಾಗಿ ರಕ್ತನಾಳಗಳಿಗೆ ತಲುಪುತ್ತದೆ. ಕೊರೊನಾ ತಗುಲಿದವರಿಗೆ ಇದು ಮತ್ತಷ್ಟು ಪರಿಣಾಮ ಬೀರಲಿದೆ, ಹಾಗಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸಿದೆಯೆಂದು ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಸಹ ಈ ಬಗ್ಗೆ ದೊಡ್ಡ ಪ್ರಮಾಣದ ಅಧ್ಯಯನ ನಡೆಸಲಾಗಿದ್ದು, ಮಾಲಿನ್ಯದಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಬ್ರಿಟಿಷ್ ಸಂಶೋಧಕರು ಕೈಗೊಂಡ ಅಧ್ಯಯನದಲ್ಲಿ, ಮಾಲಿನ್ಯದಿಂದಾಗಿ ಕೋವಿಡ್‌ನ ತೀವ್ರತೆಯು ಹೆಚ್ಚುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಹಾಗಾಗಿ ಈ ಬಾರಿಯ ದೀಪಾವಳಿ ಹಬ್ಬದ ಆಚರಣೆ ವೇಳೆ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.