ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಡಿಜಿಟಲ್ ವೇದಿಕೆಯಲ್ಲಿ ಯೋಗ ದಿನ ನಡೆಯುತ್ತಿದೆ.
ಈ ವರ್ಷ ಕೊರೊನಾ ಕಾರಣದಿಂದಾಗಿ ‘ಮನೆಯಲ್ಲಿ ಯೋಗ, ಕುಟುಂಬದೊಡನೆ ಯೋಗ’ ಎಂಬ ಘೋಷಣೆಯೊಂದಿಗೆ ಯೋಗ ದಿನಾಚರಣೆ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಜನರು ಡಿಜಿಟಲ್ ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಈ ಕಾರ್ಯಕ್ರಮದ ಪ್ರಮುಖ ಭಾಗವಾಗಿರಲಿದ್ದು, ಬೆಳಗ್ಗೆ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರದಲ್ಲಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ತಂಡವು ಯೋಗಾಭ್ಯಾಸದ ಪ್ರದರ್ಶನ ನೀಡಲಿದೆ.
ಈ ವರ್ಷದ ಯೋಗ ದಿನಾಚರಣೆಯನ್ನು ಲೇಹ್‌ನಲ್ಲಿ ಅದ್ಧೂರಿಯಾಗಿ ಆಚರಿಸಲು ಆಯುಷ್ ಸಚಿವಾಲಯ ಉದ್ದೇಶಿಸಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಇದನ್ನು ರದ್ದುಗೊಳಿಸಲಾಗಿದೆ.