ವಿಶ್ವದೆಲ್ಲೆಡೆ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಶೋಷಣೆಯ ವಿರುದ್ಧ ಒಂಬತ್ತು ವರ್ಷಗಳ ಹಿಂದೆ ಅಮೆರಿಕದ ಆರ್ಥಿಕ ವ್ಯವಸ್ಥೆಯ ನರ ಮಂಡಲದಂತಿರುವ ನ್ಯೂಯಾರ್ಕ್‌ನಲ್ಲಿ ‘ವಾಲ್ ಸ್ಟ್ರೀಟ್ ಆಕ್ರಮಿಸು’ ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಚಳುವಳಿಯು ಕೇವಲ ಒಂದು ತಿಂಗಳ ಅವಧಿಯಲ್ಲಿ ವಿಶ್ವದಾದ್ಯಂತ ಹರಡಿತು. ಕಾಡ್ಗಿಚ್ಚಿನ ವೇಗದಲ್ಲಿ ಹರಡಿದ ಈ ಚಳುವಳಿ, ವಿಶೇಷವಾಗಿ ಉತ್ತರ ಅಮೆರಿಕಾ ಮತ್ತು ಯುರೋಪಿನಲ್ಲಿ 750 ಕ್ಕೂ ಹೆಚ್ಚು ಪ್ರತಿಭಟನೆಗಳಿಗೆ ಕಾರಣವಾಯಿತು. ವಿಶ್ವದಲ್ಲಿ ಶೇಕಡಾ ಒಂದರಷ್ಟಿರುವ ಜನರ ಸಂಪತ್ತಿನ ಅವ್ಯಾಹತ-ಅನೂಹ್ಯ ಏರಿಕೆಯ ಕುರಿತಾದ ಚರ್ಚೆಯು ಕೋವಿಡ್ ಭೀತಿಯ ನಡುವೆ ಮತ್ತೆ ಹೊಸ ತಿರುವು ಪಡೆದುಕೊಂಡಿದೆ.
ಹೌದು, 'ಕಳೆದ ಕೆಲ ದಶಕಗಳಲ್ಲಿ ನಾವು ಸಾಧಿಸಿದ ಜಾಗತಿಕ ಅಭಿವೃದ್ಧಿ, ಕೊರೊನಾ ವೈರಸ್ ಹಾವಳಿಯಿಂದಾಗಿ ಸಂಪೂರ್ಣ ನಿಷ್ಪಲವಾಗುವ ಅಪಾಯದಲ್ಲಿದೆ' ಎಂದು ಕೆಲವು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸೂಚಿಸಿತ್ತು. ಜೊತೆಗೆ, ಕೋವಿಡ್ ವೈರಸ್ ಬಡ ಜನರ ಬದುಕಿನಲ್ಲಿ ಚೆಲ್ಲಾಟವಾಡಲಿದೆ ಎಂದು ಸಂಸ್ಥೆ ಎಚ್ಚರಿಸಿತ್ತು. ಇದೀಗ ಅವೆಲ್ಲ ಎಚ್ಚರಿಕೆ ನಿಜವಾಗುವ ಆತಂಕ ಎದುರಾಗಿದೆ. ಕೋವಿಡ್ ಹಾವಳಿಯಿಂದಾಗಿ ಜಾಗತಿಕವಾಗಿ ಕನಿಷ್ಠವೆಂದರೂ ಹತ್ತು ಕೋಟಿ ಜನರು ಮತ್ತೆ ಬಡತನದ ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದಾರೆ. ದುರಂತವೆಂದರೆ, ಇದೇ ಸಮಯದಲ್ಲಿ ಶ್ರೀಮಂತರ ಶ್ರೀಮಂತಿಕೆ ಕೂಡಾ ದೊಡ್ಡ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಈ ವರ್ಷ ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ಕಾರಣ ವಿಶ್ವದ ಅಗ್ರ ಹತ್ತು ಶತಕೋಟ್ಯಾಧಿಪತಿಗಳ ಸಂಪತ್ತು ಸುಮಾರು 30 ಲಕ್ಷ ಕೋಟಿಗಳಷ್ಟು ಏರಿಕೆ ಕಂಡಿದೆ. ಅದೇ ಸಮಯಕ್ಕೆ ದಿನಕ್ಕೆ ಎರಡು ಡಾಲರ್‌ಗಿಂತ ಕಡಿಮೆ ಆದಾಯದಲ್ಲಿ ಜೀವಿಸುವ ಬಡ ಜನರ ಸಂಖ್ಯೆಗೆ ಹೆಚ್ಚುವರಿಯಾಗಿ ಹತ್ತು ಕೋಟಿ ಸೇರ್ಪಡೆಗೊಂಡಿದೆ. ಇದು ವಿಪರ್ಯಾಸವೆಂದರೆ ತಪ್ಪಾಗಲಾರದು.
ಶೋಷಣೆಯ ಹೊಸ ಪ್ರಯೋಗಗಳು:
ಇನ್ನು ಕೋವಿಡ್ ಸಮಯದಲ್ಲಿ ವಿಶ್ವವು ಶೋಷಣೆಯ ಹೊಸ ಪ್ರಯೋಗಗಳನ್ನು ಕಂಡಿದೆ. ಹೆಚ್ಚಿನ ಸಂಪನ್ಮೂಲಗಳ ಬಳಕೆ-ಹೆಚ್ಚಿನ ಸಂಪತ್ತು ಸೃಷ್ಟಿ-ಬಡತನ ನಿರ್ಮೂಲನಕ್ಕೆ ಸಹಕಾರಿ ಎಂಬ ಸುಳ್ಳುವಾದ ಸರಣಿಯನ್ನು ಕೋವಿಡ್ 19 ಸಾಂಕ್ರಾಮಿಕ ರೋಗ ಮತ್ತೊಮ್ಮೆ ಶ್ರುತಪಡಿಸಿದೆ. ಇಂತಹ ಒಂದು ವಾದಸರಣಿ, ಅಭಿವೃದ್ಧಿಶೀಲ ದೇಶಗಳಲ್ಲಿ ಸಂಪನ್ಮೂಲಗಳ ಹೆಚ್ಚಿನ ಲೂಟಿ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಮೌಲ್ಯಗಳ ನಾಶಕ್ಕೆ ಕಾರಣವಾಗಿದೆ. ಇದರ ಬದಲಿಗೆ ಈ ವಾದ ಬಳಸಿಕೊಂಡು ಅಳವಡಿಸಿಕೊಳ್ಳಲಾದ ಅಭಿವೃದ್ಧಿ ಮಾದರಿ ಇಂದು ಪ್ರಪಂಚದಾದ್ಯಂತ ಹೆಚ್ಚಿನ ಅಸಮಾನತೆ ಸೃಷ್ಟಿಸಿದೆ. ಕೋವಿಡ್ ನಮ್ಮಲ್ಲಿನ ಹಲವು ಮಿಥ್ಯವಾದ ಸರಣಿಗಳನ್ನು ಎತ್ತಿ ತೋರಿಸಿದೆ.
ವಿಶ್ವ ಬ್ಯಾಂಕ್ ವರದಿ ಪ್ರಕಾರ, ಕೋವಿಡ್‌ನಿಂದಾಗಿ ಉದ್ಯೋಗ ಕಳೆದುಕೊಂಡು ಬಡತನಕ್ಕೆ ಸಿಲುಕಿದವರ ಸಂಖ್ಯೆ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಇದು ತೀರಾ ಇತ್ತೀಚಿನ ವರದಿಯಲ್ಲಿ ನೀಡಿದ ಮಾಹಿತಿ. ಕೊಳೆಗೇರಿಗಳಲ್ಲಿ ವಾಸಿಸುವ ಮತ್ತು ಅರೆಕಾಲಿಕ, ಅಸಂಘಟಿತ ಕ್ಷೇತ್ರಗಳಲ್ಲಿ ಆದಾಯ ಕಂಡುಕೊಂಡಿದ್ದ ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೋವಿಡ್ ದುಷ್ಪರಿಣಾಮವನ್ನು ದೊಡ್ಡ ಮಟ್ಟಿಗೆ ಎದುರಿಸುತ್ತಿದ್ದಾರೆ. ಅವರ ಬದುಕಿನಲ್ಲಿ ಕೋವಿಡ್ ಹಾಗೂ ನಂತರದ ಬೆಳವಣಿಗೆಗಳು ಚೆಲ್ಲಾಟವಾಡಿವೆ ಎಂದರೆ ತಪ್ಪಾಗಲಾರದು.
ಹಲವಾರು ಆಫ್ರಿಕನ್ ಮತ್ತು ಏಷ್ಯಾದ ದೇಶಗಳಲ್ಲಿ ವಿಶ್ವಬ್ಯಾಂಕ್ ನಡೆಸಿದ ಅಧ್ಯಯನವೊಂದರಲ್ಲಿ ನಗರ ಜನರು ಹೆಚ್ಚು ಬಡತನದ ಪೆಟ್ಟು ತಿನ್ನುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕಿಂತ ಮುಖ್ಯವಾಗಿ, ಕೋವಿಡ್ ಇತ್ತೀಚೆಗೆ ದಕ್ಷಿಣ ಏಷ್ಯಾದಲ್ಲಿ ಕನಿಷ್ಠ ಐದಾರು ಕೋಟಿ ಜನರನ್ನು ಬಡತನದ ದವಡೆಗೆ ತಳ್ಳಿದೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಕೆಳಭಾಗದಲ್ಲಿರುವ 47 ದೇಶಗಳ ಆರ್ಥಿಕ ಬೆಳವಣಿಗೆ ಅಲ್ಲಿನ ಆರೋಗ್ಯ ವ್ಯವಸ್ಥೆಗಿಂತ ಹದಗೆಟ್ಟಿದೆ. ಜಾಗತಿಕ ವ್ಯಾಪಾರವು ಕುಸಿದಿದೆ. ಪ್ರವಾಸೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿವೆ ಮತ್ತು ಕೋವಿಡ್ ನಿಯಂತ್ರಣಕ್ಕಾಗಿ ವಿಧಿಸಲಾದ ಲಾಕ್‌ಡೌನ್‌ಗಳು ಉದ್ಯೋಗ ಸೃಷ್ಟಿ ಕ್ಷೇತ್ರಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಈ ಬಡ ದೇಶಗಳ ವ್ಯಾಪಾರ ಕೊರತೆ 9.1 ಸಾವಿರ ಕೋಟಿಗಳನ್ನು ಮೀರುವ ನಿರೀಕ್ಷೆಯಿದೆ. ಇದು ಈ ದೇಶಗಳ ಪಾಲಿಗೆ ವಜ್ರಾಘಾತ ನೀಡಿವೆ ಎಂದರೆ ತಪ್ಪಾಗಲಾರದು. ಕೊರೊನಾ ತಂದಿಟ್ಟಿರುವ ಸಂಕಷ್ಟದ ಕಾರಣದಿಂದಾಗಿ, ಅದರ ವಿರುದ್ಧ ಹೇಗೆ ಹೋರಾಡಬೇಕೆಂದು ತಿಳಿಯಲು ಸಾಧ್ಯವಾಗದೆ 110 ಕ್ಕೂ ಹೆಚ್ಚು ದೇಶಗಳು ಮಾನವೀಯ ಮತ್ತು ಆರ್ಥಿಕ ಸಹಾಯಕ್ಕಾಗಿ ಐಎಂಎಫ್ ಮೊರೆ ಹೋಗಿವೆ. ದೊಡ್ಡ ದೇಶಗಳು ಈ ವರ್ಷದ ಅಂತ್ಯದವರೆಗೆ ಕೆಲವು ಬಡ ದೇಶಗಳ ಸಾಲ ಮರುಪಾವತಿಯನ್ನು ಮುಂದೂಡುವುದಾಗಿ ತಿಳಿಸಿವೆ. ಆ ಮಟ್ಟಿಗೆ, ಈ ವರ್ಷ 73 ಟ್ರಿಲಿಯನ್ ಪಾವತಿ ಮಾಡುವ ಹೊಣೆಯನ್ನು ಆ ದೇಶಗಳಿಗೆ ಕಡಿಮೆ ಮಾಡಲಾಗಿದ್ದರೂ ಆ ಭಾರವನ್ನು ಆ ಸಾಲಗಾರ ದೇಶಗಳು ಮುಂದಿನ ದಿನಗಳಲ್ಲಿ ಹೇಗೆ ನಿಭಾಯಿಸುತ್ತವೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ಸಾಲದ ಪ್ರಮಾಣ ಮುಂದಿನ ವರ್ಷ ದ್ವಿಗುಣಗೊಳ್ಳುವ ಸಾಧ್ಯತೆ ಇದೆ.
ಕೊರೊನಾವನ್ನು ನಿಯಂತ್ರಿಸಲು ಸದ್ಯ ಲಭ್ಯವಿರುವ ಏಕೈಕ ರಾಮಬಾಣವೆಂದರೆ ಲಸಿಕೆಗಳು. ಈ ಲಸಿಕೆಗಳು ದುಬಾರಿಯಾಗಿವೆ. ಈ ಲಸಿಕೆಗಳಿಗಾಗಿ ಬಡ ದೇಶಗಳ ಕಾಯುವಿಕೆಗೆ ಅಂತ್ಯವಿಲ್ಲ ಎಂಬ ಭೀತಿ ಎಲ್ಲರನ್ನೂ ಕಾಡುತ್ತಿದೆ. ವಿಶ್ವದ ಜನಸಂಖ್ಯೆಯ ಶೇಕಡಾ 14 ರಷ್ಟನ್ನು ಹೊಂದಿರುವ ಶ್ರೀಮಂತ ರಾಷ್ಟ್ರಗಳು, ಈಗ ಕೋವಿಡ್ ವಿರುದ್ಧ ಕಂಡು ಹಿಡಿಯಲಾದ ಎಲ್ಲಾ ಲಸಿಕೆಗಳಲ್ಲಿ ಶೇಕಡಾ 53 ರಷ್ಟನ್ನು ತಮ್ಮ ಬಳಿಯಲ್ಲಿಯೇ ಸಂಗ್ರಹಿಸಲು ವ್ಯವಸ್ಥೆಗಳನ್ನು ಮಾಡಿ ಕೊಂಡಿರುವಂತೆ ತೋರುತ್ತದೆ! ಶ್ರೀಮಂತ ದೇಶಗಳು ಮುಂದಿನ ವರ್ಷದ ಅಂತ್ಯದ ವೇಳೆಗೆ ಮೂರು ಡೋಸ್ ಲಸಿಕೆಗಳನ್ನು ತಮ್ಮ ಜನರಿಗೆ ನೀಡಲು ಸಜ್ಜಾಗಿವೆ. ಕೆನಡಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಗತ್ಯವಿದ್ದರೆ ಪ್ರತಿ ವ್ಯಕ್ತಿಗೆ ಐದು ಬಾರಿ ಲಸಿಕೆ ನೀಡಲು ಈ ದೇಶ ಸಿದ್ಧವಾಗಿದೆ. ಪರಿಸ್ಥಿತಿ ಇದೇ ತೆರನಾಗಿ ಮುಂದುವರಿದರೆ ಪ್ರಪಂಚದಾದ್ಯಂತದ ಲಕ್ಷಾಂತರ ಜನರಿಗೆ ಕನಿಷ್ಠ ಒಂದು ವರ್ಷದವರೆಗೆ ಲಸಿಕೆ ಪಡೆಯಲು ಸಾಧ್ಯವಾಗುವುದಿಲ್ಲ! ಇದು ಕೋವಿಡ್ ಸಮಸ್ಯೆ ಮತ್ತಷ್ಟು ಉಲ್ಬಣವಾಗುವಂತೆ ಮಾಡುವ ಸಾಧ್ಯತೆ ಇದೆ.
ಹೊಸ ಅಭಿವೃದ್ಧಿ ಮಾದರಿಗಳ ಅವಶ್ಯಕತೆ:
ಈ ಎಲ್ಲಾ ಸವಾಲುಗಳ ಹಿನ್ನೆಲೆಯಲ್ಲಿ ನಾವು ಯೋಚಿಸಬೇಕಾಗಿರುವುದು, ಹೊಸ ಅಭಿವೃದ್ಧಿ ಮಾದರಿಗಳತ್ತ. ಪ್ರಸ್ತುತ ಇರುವುದು ಕೆಲವರು ಸಂಪತ್ತನ್ನು ಆನಂದಿಸುವ ಮತ್ತು ಬಹುಪಾಲು ಜನರು ಬಡತನದಿಂದ ಬಳಲುತ್ತಿರುವ ಅನಿಶ್ಚಿತ ಸ್ಥಿತಿ. ಈ ಸವಾಲುಗಳು, ದುಸ್ಥಿತಿ ಕೇವಲ ಮೂರನೇ ವಿಶ್ವದ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಇದು ನಿಧಾನವಾಗಿ ಶ್ರೀಮಂತ ರಾಷ್ಟ್ರಗಳಿಗೂ ವಿಸ್ತರಿಸಲ್ಪಡುತ್ತಿದೆ. ಶ್ರೀಮಂತ ದೇಶಗಳ ಒಕ್ಕೂಟವಾದ 'ದಿ ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್‌ಮೆಂಟ್(ಒಇಸಿಡಿ)' ಯ 37 ದೇಶಗಳ ನಡುವಿನ ಆರ್ಥಿಕ ಅಸಮಾನತೆಗಳು ಕಳೆದ 50 ವರ್ಷಗಳಲ್ಲಿ ಹಿಂದೆಂದೂ ಕಾಣದ ಮಟ್ಟಕ್ಕೆ ವಿಸ್ತರಿಸಿವೆ ಎಂದು ಅಧ್ಯಯನಗಳು ತಿಳಿಸುತ್ತಿವೆ. ಇದು ವಿಶ್ವಾದ್ಯಂತ ಕೊರೊನಾ ಸೃಷ್ಟಿಸಿರುವ ನಕಾರಾತ್ಮಕ ಪರಿಣಾಮದ ಒಂದು ಉದಾಹರಣೆಯಷ್ಟೆ. ವಿಶ್ವದ ಎಲ್ಲಾ ದೇಶಗಳನ್ನು ಕೊರೊನಾ ಸಾಂಕ್ರಾಮಿಕ ರೋಗ ಬಾಧಿಸಿದೆ. ಇದರ ನಡುವೆ ಕೋವಿಡ್‌ನ ದುಬಾರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದೊಡ್ಡ ಮಟ್ಟದ ಬಿಲ್ ಪಾವತಿಸುವಂತಾದರೆ ಅಥವಾ ಒಂದು ವರ್ಷ ಬೆಳೆ ವಿಫಲವಾದರೆ ಲಕ್ಷಾಂತರ ಜನರು ಮತ್ತೆ ತೀವ್ರ ಬಡತನಕ್ಕೆ ಇಳಿಯುತ್ತಾರೆ. ಏಕೆಂದರೆ, ಅವರಲ್ಲಿ ಇಂತಹ ಸವಾಲನ್ನು ಎದುರಿಸುವ ಆರ್ಥಿಕ ಶಕ್ತಿ ಇಲ್ಲ.
ಈಗ ಲಭ್ಯವಿರುವ ಮಾಹಿತಿ ಹಾಗೂ ದತ್ತಾಂಶಗಳ ಪ್ರಕಾರ, ಶ್ರೀಮಂತ ಕುಟುಂಬಗಳಿಗಿಂತ ಬಡ ಸಮುದಾಯಗಳ ಜನರು ಸರಾಸರಿ 15 ವರ್ಷಗಳ ಮೊದಲೇ ಸಾಯುತ್ತಾರೆ. ಇದನ್ನು ಸಾಕಷ್ಟು ಅಧ್ಯಯನಗಳು ದೃಢಪಡಿಸಿವೆ ಕೂಡ. ಅಂದರೆ, ಸರಾಸರಿ ಬದುಕುವ ವಯಸ್ಸು ಬಡವರಲ್ಲಿ ಕಡಿಮೆ. ವಿಶ್ವದ ದೊಡ್ಡ, ಶಕ್ತಿವಂತ ದೇಶಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಆದಾಯ, ಬಲವರ್ಧನೆಗಾಗಿ ಕೈಗೊಳ್ಳುವ ಕಾರ್ಯತಂತ್ರಗಳಿಂದಾಗಿ ಬಡ ದೇಶಗಳ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಈ ಸಮಸ್ಯೆ, ಸವಾಲನ್ನು ಮೆಟ್ಟಿ ನಿಲ್ಲಲು, ಬಡ ದೇಶಗಳು, ಸೂಕ್ತವಾದ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸುವ ಮತ್ತು ಪ್ರಾಮಾಣಿಕ ಪ್ರಯತ್ನ ಕೈಗೊಳ್ಳುವುದೇ ಅವುಗಳ ಮುಂದಿರುವ ಮಾರ್ಗ. ಇದೇ ಈಗ ಎಲ್ಲರಿಗೆ ಬೇಕಾಗಿರುವುದು ಮತ್ತು ಇಂದಿನ ತುರ್ತು ಅವಶ್ಯಕತೆ.
ಪ್ರಸ್ತುತ ಎಲ್ಲಾ ಅಭಿವೃದ್ಧಿ ಮಾದರಿಗಳನ್ನು ಏಕಕಾಲದಲ್ಲಿ ಬದಲಾಯಿಸಲು ಮತ್ತು ಪರಿಸರ ಸ್ನೇಹಿ ಆರ್ಥಿಕತೆಯನ್ನು ಅಳವಡಿಸಿಕೊಳ್ಳಲು ಕೊರೋನ ರೂಪದಲ್ಲಿ ನಮಗೆ ಮತ್ತೊಂದು ಅವಕಾಶ ಸಿಕ್ಕಿದೆ. ಈ ಬಿಕ್ಕಟ್ಟಿನ ಲಾಭವನ್ನು ನಾವು ಪಡೆದುಕೊಂಡರೆ ಮತ್ತು ಅದನ್ನು ಒಂದು ಅವಕಾಶವಾಗಿ ಪರಿವರ್ತಿಸಿದರೆ, ಅಸಮಾನತೆ ರಹಿತವಾದ ಸಮಾನತೆಯ ನೆಲೆಗಟ್ಟಿನಲ್ಲಿ ಹೊಸ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸುವತ್ತ ಸಾಗಿದರೆ ಎಲ್ಲರೂ, ಎಲ್ಲಾ ದೇಶಗಳಿಗೂ ಮಾನವೀಯತೆಯು ಮೊದಲ ಹೆಜ್ಜೆಗಳನ್ನು ಇಡಲು ಸಾಧ್ಯವಾಗಲಿದೆ.