ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟ ಸೋನು ಸೂದ್ ಅವರ ಸಾಮಾಜಿಕ ಸೇವೆ ಮುಂದುವರೆದಿದೆ. ಸಂಕಷ್ಟದಲ್ಲಿರುವವರಿಗೆ ಅವರ ಹಸಾಯ ಹಸ್ತದ ಕೆಲಸ ನಿರಂತರವಾಗಿ ನಡೆಯುತ್ತಲೇ ಸಾಗಿದೆ. ಇದೀಗ ಕೊರೊನಾ ಬಿಕ್ಕಟ್ಟಿನಿಂದ ಕೆಲಸ ಕಳೆದುಕೊಂಡು ಹೈದರಾಬಾದ್‌ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ 28 ವರ್ಷದ ಮಹಿಳೆಗೆ ಕೆಲಸ ನೀಡಿ ಸಹಾಯಕ್ಕೆ ಧಾವಿಸಿದ್ದಾರೆ.
ಉನಾದಾಡಿ ಶಾರದಾ ಹೈದರಾಬಾದ್ ನಿವಾಸಿಯಾಗಿದ್ದು, ಎಂಎನ್‌ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಅವರು ಕೆಲಸ ಕಳೆದುಕೊಂಡಿದ್ದರು. ಜೀವನ ನಡೆಸುವ ಅನಿವಾರ್ಯತೆ ಶಾರದಾ ಅವರಿಗೆ ಎದುರಾಗಿತ್ತು. ಹೀಗಾಗಿ ಅವರು ತರಕಾರಿ ಮಾರಾಟ ಮಾಡಲು ಪ್ರಾರಂಭಿಸಿದ್ದರು.
ಮಹಿಳೆಯ ಕಷ್ಟದ ಬಗ್ಗೆ ತಿಳಿದ ಸೂದ್ ಅವರಿಗೆ ಕೆಲಸ ಕೊಡಿಸುವಲ್ಲಿಸಹಾಯ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಾರದಾ, ಇತ್ತೀಚೆಗೆ ನನಗೆ ಬಾಲಿವುಡ್ ನಟ ಸೋನು ಸೂದ್ ಅವರಿಂದ ಕರೆ ಬಂತು, ಕೆಲಸದ ಸಲುವಾಗಿ ನಾನು ಸಂದರ್ಶನವೊಂದನ್ನು ಎದುರಿಸಿದೆ. ಕೆಲಸಕ್ಕೆ ಸೇರುವ ಬಗ್ಗೆ ಶೀಘ್ರವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದಿದ್ದಾರೆ.
ಇದೇ ವೇಳೆ ಮಾತು ಮುಂದುವರಿಸಿದ ಅವರು, ಕೋವಿಡ್ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡ ಅನೇಕ ಜನರಿದ್ದಾರೆ. ಈ ನಿರ್ಣಾಯಕ ಪರಿಸ್ಥಿತಿಯಲ್ಲಿ ನಿರುದ್ಯೋಗಿ ಯುವಕರಿಗೆ ಸಹಾಯ ಮಾಡಲು ಅವರಂತೆ ಇನ್ನೂ ಹೆಚ್ಚಿನ ಜನರು ಮುಂದೆ ಬರಬೇಕು ಎಂದು ನಾನು ಬಯಸುತ್ತೇನೆ" ಎಂದಿದ್ದಾರೆ ಶಾರದಾ.
ಸೋನು ಸೂದ್ ಸಹಾಯದ ಪಟ್ಟಿ ಬೆಳೆಯುತ್ತಲೇ ಇದೆ. ವಲಸಿಗರಿಗೆ ಪ್ರಯಾಣದ ವೆಚ್ಚ, ಬಸ್ , ರೈಲಿನ ವ್ಯವಸ್ಥೆ ಬಳಿಕ, ಸಂಕಷ್ಟದಲ್ಲಿರುವ ಕಲಾವಿದರ ಸಹಾಯಕ್ಕೂ ನಿಂತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಬಡ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿದ್ದರು.
ಮೌಂಟೇನ್ಮ್ಯಾನ್ ಎಂದು ಕರೆಸಿಕೊಳ್ಳುವ ಮಾಂಜಿ ಕುಟುಂಬಕ್ಕೆ ಸಹಾಯ ಮಾಡಿದ್ದರು. ಈಗ ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಗೆ ಕೆಲಸ ಕೊಡಿಸಿ ಸಹಾಯಕ್ಕೆ ಧಾವಿಸಿದ್ದಾರೆ ನಟ ಸೋನು ಸೂದ್.