ಚಂಬಾ: ಹಿಮಾಚಲಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದೆ. ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ರವಿವಾರ ರಾತ್ರಿ 11.48 ಗಂಟೆಗೆ 4.5 ರಿಕ್ಟರ್ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಎರಡೇ ನಿಮಿಷಗಳ ಅಂತರದಲ್ಲಿ 11.50ಕ್ಕೆ ಮತ್ತೊಮ್ಮೆ ಭೂಮಿ ಕಂಪಿಸಿದೆ. ಭೂಕಂಪದಿಂದ ಆತಂಕಗೊಂಡ ಜನತೆ ರಾತ್ರಿ ಮನೆಗಳಿಂದ ಹೊರಬಂದರು. ಸೋಮವಾರ ಬೆಳಗ್ಗೆ 7ರ ಸುಮಾರಿಗೆ ಮತ್ತೆ ಭೂಕಂಪನವಾಗಿದೆ.
ಕಳೆದ ಎರಡು ದಿನಗಳ ಅವಧಿಯಲ್ಲಿ ಒಟ್ಟಾರೆ 13 ಬಾರಿ ಭೂಕಂಪದ ಅನುಭವವಾಗಿದೆ. ಇದರಿಂದ ಚಂಬಾ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದಾರೆ. ಕೊರೊನಾ ವೈರಸ್ ಲಾಕ್ಡೌನ್ನಿಂದ ಕಂಗೆಟ್ಟಿರುವ ಜನತೆಗೆ ಭೂಕಂಪದ ಹೊಡೆತ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಭೂಕಂಪನದಿಂದ ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಆದರೆ, ಜಿಲ್ಲೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಯಾವುದೇ ಸಂಭವನೀಯ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ವಿವೇಕ್ ಭಾಟಿಯಾ ತಿಳಿಸಿದ್ದಾರೆ..