ಪೂರ್ವ ಗೋದಾವರಿ(ಆಂಧ್ರಪ್ರದೇಶ್): ಪೊಲೀಸ್ ಕಾನ್ಸ್ಟೇಬಲ್ ಸಮಯ ಪ್ರಜ್ಞೆ, ಜನರ ಜಾಗರೂಕತೆಯಿಂದ ಆಕಸ್ಮಿಕವಾಗಿ ಗೋದಾವರಿ ನದಿಗೆ ಬಿದ್ದಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಕಪಿಲೇಶ್ವರಂ ವಲಯದ ಅಂಗರ ಗ್ರಾಮದ ರಮೇಶ್ ಎಂಬ ವ್ಯಕ್ತಿ, ರಾವುಲಪಾಲಂನಿಂದ ಕೆಲಸ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ವೇಳೆ, ಜೊನಾಡಾ ಗೌತಮಿ ಹಳೆಯ ಸೇತುವೆಯನ್ನು ತಲುಪಿದಾಗ, ಪೆಟ್ರೋಲ್ ಖಾಲಿ ಆಗಿದ್ದಕ್ಕೆ ಬೈಕ್ ನಿಂತಿದೆ. ತನ್ನ ತಂದೆಗೆ ಕರೆ ಮಾಡಿ ಪೆಟ್ರೋಲ್ ತರಲು ತಿಳಿಸಿ ಸೇತುವೆಯ ಮೇಲೆ ಕುಳಿತಿದ್ದಾಗ ಆಕಸ್ಮಿಕವಾಗಿ ಯುವಕ ನದಿಗೆ ಬಿದ್ದಿದ್ದಾನೆ.
ಅದೇ ಸಮಯಕ್ಕೆ ಅಲಮೂರ್ ಹೆಡ್ ಕಾನ್ಸ್ಟೇಬಲ್ ಪ್ರಭಾಕರ್ ರಾವ್ ಎಂಬುವರು ಯುವಕ ಬಿದ್ದಿದ್ದನ್ನು ನೋಡಿದರು. ನದಿಗೆ ಬಿದ್ದಿದ್ದ ರಮೇಶ್ ಸೇತುವೆಯ ಕಂಬವನ್ನು ಹಿಡಿದು ತೇಲಿಹೋಗದಂತೆ ನಿಂತಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಸೇತುವೆ ಮೇಲೆ ಸಂಚರಿಸುತ್ತಿದ್ದ ವಾಹನ ಚಾಲಕರನ್ನು ಎಚ್ಚರಿಸಿದ್ದಾರೆ.
ಅದೇ ಸಮಯಕ್ಕೆ ಮಿನಿ ವ್ಯಾನ್ನಲ್ಲಿದ್ದ ಹಗ್ಗವನ್ನು ರಮೇಶ್ ಕಡೆಗೆ ಎಸೆದು ಜನರ ಸಹಾಯದಿಂದ ಯುವಕನನ್ನು ಮೆಲೆಕ್ಕೆತ್ತಿದ್ದಾರೆ. ಸದ್ಯ ಯುವಕ ಸುರಕ್ಷಿತವಾಗಿದ್ದು, ಬದುಕಿತು ಬಡಜೀವ ಎಂದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.