ನವದೆಹಲಿ: ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ತಿರುವು ಕ್ಷಣಕ್ಷಣಕ್ಕೂ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಪಕ್ಷದ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಎಐಸಿಸಿ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ.
ಸಿಂದಿಯಾ ಬರೆದ ಪತ್ರದಲ್ಲಿ ಏನಿದೆ!?
ಕಳೆದ 18 ವರ್ಷಗಳಿಂದ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯನಾಗಿ ಸೇವೆ ಸಲ್ಲಿಸಿದ್ದು, ಇದೀಗ ಮುಂದೆ ಸಾಗಲು ಇಂದು ಸಕಾಲ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ಇದೀಗ ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದೇನೆ. ನಿಮಗೆ ಚೆನ್ನಾಗಿ ಗೊತ್ತಿರುವಂತೆ ಕಳೆದ ಒಂದು ವರ್ಷದಿಂದಲು ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿತ್ತು ಎಂಬುದು ನಿಮಗೆ ತಿಳಿದಿದೆ.
ನನ್ನ ರಾಜ್ಯದ ಹಾಗೂ ದೇಶದ ಜನರ ಸೇವೆ ಮಾಡುವುದೇ ನನ್ನ ಮುಖ್ಯ ಉದ್ದೇಶ. ಆದರೆ ಇಲ್ಲಿ ಉಳಿದುಕೊಂಡು ಅದನ್ನ ಮಾಡಲು ಸಾಧ್ಯವಾಗುತ್ತಿಲ್ಲ. ಹೊಸ ಪಥದತ್ತ ಸಾಗುವುದು ಅನಿವಾರ್ಯವಾಗಿದ್ದು, ಆದ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಇಷ್ಟು ದಿನ ನನ್ನ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಿಮಗೆ ನಾನು ಧನ್ಯವಾದ ತಿಳಿಸುವೆ ಎಂದು ಬರೆದಿದ್ದಾರೆ.
ಇದೇ ವೇಳೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಧನ್ಯವಾದ ತಿಳಿಸಿರುವ ಸಿಂದಿಯಾ, ಪಕ್ಷದಲ್ಲಿದ್ದುಕೊಂಡು ದೇಶದ ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಥ್ಯಾಂಕ್ಸ್ ಎಂದು ತಿಳಿಸಿದ್ದಾರೆ.