ಪಾಟ್ನಾ: ಬಿಹಾರದಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, 243 ಮತ ಕ್ಷೇತ್ರಗಳ ಅಸೆಂಬ್ಲಿ ಎಲೆಕ್ಷನ್ಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 28, ನವೆಂಬರ್ 3 ಹಾಗೂ 7ರಂದು ವೋಟಿಂಗ್ ನಿಗದಿಯಾಗಿದೆ. ಇದರ ಫಲಿತಾಂಶ ನವೆಂಬರ್ 10ರಂದು ಹೊರಬೀಳಲಿದೆ.
ಬಿಜೆಪಿ - ಜೆಡಿಯು ದೋಸ್ತಿ ಸರ್ಕಾರ ಹಾಗೂ ಕಾಂಗ್ರೆಸ್ - ಆರ್ಜೆಡಿ ಮಹಾಘಟಬಂಧನ್ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಈಗಾಗಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಕಣಕ್ಕಿಳಿದಿವೆ.
ಮೊದಲ ಹಂತದ ಚುನಾವಣೆ ಅಕ್ಟೋಬರ್ 28ರಂದು ನಡೆಯಲಿರುವ ಕಾರಣ ಕಾಂಗ್ರೆಸ್ 30 ಸ್ಟಾರ್ ಕ್ಯಾಂಪೇನರ್ ಪಟ್ಟಿ ರಿಲೀಸ್ ಮಾಡಿದೆ. ಪ್ರಮುಖವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ಮುಖಂಡರಿಗೆ ಮಣೆ ಹಾಕಲಾಗಿದೆ.
ಕ್ಯಾಂಪೇನರ್ ಪಟ್ಟಿಯಲ್ಲಿ ಇವರೆಲ್ಲರು!
ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಮೀರಾ ಕುಮಾರ್, ಗುಲಾಮ್ ನಬಿ ಆಜಾದ್, ಪ್ರಿಯಾಂಕಾ ಗಾಂಧಿ,ಶಕ್ತಿ ಸಿಂಹ ಗೊಹಿಲ್, ಮದನ್ ಮೋಹನ್ ಜಾ, ಸದಾನಂದ್ ಸಿಂಹ, ಅಶೋಕ್ ಗೆಹ್ಲೋಟ್, ರಂದೀಪ್ ಸಿಂಗ್ ಸುರ್ಜೆವಾಲ್, ಶತೃಘ್ನ ಸಿನ್ಹಾ, ಸಚಿನ್ ಪೈಲಟ್, ಕೀರ್ತಿ ಆಜಾದ್ ಸೇರಿ ಕೆಲ ಸ್ಥಳೀಯ ಮುಖಂಡರಿಗೆ ಅವಕಾಶ ನೀಡಲಾಗಿದೆ.
2015ರಲ್ಲಿ ಜೆಡಿಯು, ಆರ್ಜೆಡಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಬಿಜೆಪಿ ಎಲ್ಜೆಪಿ ಜೊತೆ ಕೈಜೋಡಿಸಿ ಚುನಾವಣೆ ಎದುರಿಸಿತ್ತು. ಆರ್ಜೆಡಿ 80 ಸ್ಥಾನ, ಜೆಡಿಯು 71 ಹಾಗೂ ಬಿಜೆಪಿ 53 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿತ್ತು. ಇನ್ನು 2017ರಲ್ಲಿ ಎನ್ಡಿಎ ಜತೆ ಕೈಜೋಡಿಸಿದ ನಿತೀಶ್ ಕುಮಾರ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರದ ಹೊಣೆ ಹೊತ್ತಿದ್ದಾರೆ.