ಗ್ವಾಲಿಯರ್ (ಮಧ್ಯ ಪ್ರದೇಶ): ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ 5,100 ರೂ.ಗಳ ಬಹುಮಾನ ನೀಡಲಾಗುವುದು ಎಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಜೈ ವಿಲಾಸ್ ಅರಮನೆಯ ಗೇಟ್‌ಗಳಲ್ಲಿ ಪೋಸ್ಟರ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತನನ್ನು ಬಂಧಿಸಲಾಗಿದೆ.
ಬಿಜೆಪಿ ಕಾರ್ಯಕರ್ತರು ಈ ಕುರಿತು ದೂರು ನೀಡಿದ ಬಳಿಕ, ಕಾಂಗ್ರೆಸ್ ಕಾರ್ಯಕರ್ತ ಸಿದ್ಧಾರ್ಥ್ ಸಿಂಗ್ ರಾಜಾವತ್ನನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳನ್ನು ಹುಡುಕುತ್ತಿದ್ದೇವೆ ಎಂದು ಝಾನ್ಸಿ ರಸ್ತೆ ಪೊಲೀಸ್ ಠಾಣೆಯ ನಗರ ಪೊಲೀಸ್ ವರಿಷ್ಠಾಧಿಕಾರಿ ಎಂ ರಾಜೋರಿಯಾ ತಿಳಿಸಿದ್ದಾರೆ.
ಸಿಂಧಿಯಾ ಇತ್ತೀಚೆಗೆ ಬಿಜೆಪಿ ಸೇರಿ, 22 ಬೆಂಬಲಿಗ ಶಾಸಕರೊಂದಿಗೆ ರಾಜೀನಾಮೆ ನೀಡಿರುವುದು ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾರಣವಾಯಿತು. ಇದಾದ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.