ನವದೆಹಲಿ : ಚೀನಾ ಕಂಪನಿಗಳ ದೇಣಿಗೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿಗೆ ಕೈ ನಾಯಕ ಅಭಿಷೇಕ್ ಮನು ಸಿಂಘ್ವಿ ತಿರುಗೇಟು ನೀಡಿದ್ದು, ಪಿಎಂ-ಕೇರ್ಸ್ ಚೀನಾದ ಕಂಪನಿಗಳಿಂದ 9,678 ಕೋಟಿ ರೂ. ಹಣವನ್ನು ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಹೆಚ್ಚು ಆತಂಕಕಾರಿ ಸಂಗತಿಯೆಂದ್ರೆ, ಪ್ರಧಾನಿ ನರೇಂದ್ರ ಮೋದಿಯವರು ಚೀನಾದ ಕಂಪನಿಗಳಿಂದ ಪಿಎಂ-ಕೇರ್ಸ್ಗೆ ದೇಣಿಗೆ ಪಡೆದಿದ್ದಾರೆ. ಪಿಎಂ-ಕೇರ್ಸ್ ಹೇಗೆ ನಿಯಂತ್ರಿಸಲಾಗುತ್ತದೆ ಮತ್ತು ಹಣವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ನಿಧಿಯ ಕಾರ್ಯಾಚರಣೆಯ ಚೌಕಟ್ಟು ಯಾರಿಗೂ ತಿಳಿದಿಲ್ಲ. ಅದು ಸಿಎಜಿ ಲೆಕ್ಕ ಪರಿಶೋಧನೆಗೂ ಒಳಪಟ್ಟಿಲ್ಲ ಎಂದು ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಹುವಾಯಿಯಿಂದ 7 ಕೋಟಿ ರೂ., ಟಿಕ್ಟಾಕ್ನಿಂದ 30 ಕೋಟಿ ರೂ., ಶೇ.38ರಷ್ಟು ಚೀನಾ ಹೂಡಿಕೆಯಿರುವ ಪೇಟಿಎಂನಿಂದ 100 ಕೋಟಿ ರೂ., ಶಿಯೋಮಿಯಿಂದ 15 ಕೋಟಿ ರೂ. ಮತ್ತು ಓಪೋ ಕಂಪನಿಯಿಂದ 1 ಕೋಟಿ ರೂ. ದೇಣಿಗೆ ಪಡೆದಿದ್ದೀರಾ? ಎಂದು ಸರ್ಕಾವನ್ನು ಪ್ರಶ್ನಿಸಿದ್ದಾರೆ.
ಚೀನಾದ ದ್ವೇಷದ ಹೊರತಾಗಿಯೂ ಪ್ರಧಾನಿ ಮೋದಿ ಅವರು ಪಿಎಂ-ಕೇರ್ಸ್ ನಿಧಿಗೆ ಚೀನಾದ ಹಣವನ್ನು ಏಕೆ ಸ್ವೀಕರಿಸಿದ್ದಾರೆ? ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್ಆರ್ಎಫ್) ಪಡೆದ ದೇಣಿಗೆಯನ್ನು ಪಿಎಂ-ಕೇರ್ಸ್ ನಿಧಿಗೆ ತಿರುಗಿಸಿದ್ದೀರಾ? ಭಾರತದ ಪ್ರಧಾನಿ ಚೀನಾದ ಕಂಪನಿಗಳಿಂದ ನೂರಾರು ಕೋಟಿ ದೇಣಿಗೆ ಸ್ವೀಕರಿಸುವ ಮೂಲಕ ತಮ್ಮ ಸ್ಥಾನವನ್ನು ರಾಜಿ ಮಾಡಿಕೊಂಡರೆ ಅವರು ಚೀನಾದ ಆಕ್ರಮಣಶೀಲತೆಯ ವಿರುದ್ಧ ದೇಶವನ್ನು ಹೇಗೆ ರಕ್ಷಿಸುತ್ತಾರೆ? ಎಂದು ಸಿಂಘ್ವಿ ಪ್ರಶ್ನಿಸಿದ್ದಾರೆ.