ನವದೆಹಲಿ: ನಾಲ್ಕು ದಿನಗಳ ರಷ್ಯಾ ಭೇಟಿ ವೇಳೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಾಸ್ಕೋಗೆ ತೆರಳುವ ವೇಳೆ ಇರಾನ್ ಜೊತೆಯೂ ಕೆಲವು ವಿಚಾರಗಳ ಬಗ್ಗೆ ಮಾತುಕತೆ ಇಂದು ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಕೆಲವು ದಿನಗಳಿಂದ ರಷ್ಯಾದ ಮಾಸ್ಕೋದಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದ್ದು, ರಾಷ್ಟ್ರೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದಕ್ಕೂ ಮೊದಲು ಸೆಪ್ಟೆಂಬರ್ 4ರಂದು ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ರಕ್ಷಣಾ ಸಚಿವರು ಕೆಲವು ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದರು.
ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಯ ವಾತಾವರಣ, ಆಕ್ರಮಣಶೀಲತೆ, ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ಪರಿಹಾರ ಮತ್ತು ಅಂತಾರಾಷ್ಟ್ರೀಯ ನಿಯಮಗಳನ್ನು ಗೌರವಿಸುವ ವಾತಾವರಣವನ್ನು ಭಾರತ ಬಯಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದರು. ಇದಾದ ನಂತರ ರಾಜನಾಥ್ ಸಿಂಗ್ ಇರಾನ್ಗೆ ಭೇಟಿ ನೀಡಿ ಸಭೆ ನಡೆಸಿದ್ದರು.
ಇದರ ಬೆನ್ನಲ್ಲೇ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಸ್ಟೇಟ್ ಕೌನ್ಸಿಲರ್ ಹಾಗೂ ವಿದೇಶಾಂಗ ಸಚಿವ ವಾಂಗ್ ಯಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ಜೊತೆ ಸೆಪ್ಟೆಂಬರ್ 10ರಂದು ಸಭೆ ನಡೆಯಲಿದೆ ಎಂದು ವರದಿ ಮಾಡಿದೆ.
ಎರಡೂ ರಾಷ್ಟ್ರಗಳ ನಾಯಕರು ಚೀನಾ ಹಾಗೂ ಭಾರತದ ಗಡಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದು, ಪರಿಸ್ಥಿತಿಯ ಶಮನಕ್ಕೆ ಮುಂದಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.