ಮಹಾರಾಷ್ಟ್ರ: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಿದ ಕೆಲವೇ ಗಂಟೆಗಳ ನಂತರ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕರೊಬ್ಬರು ಕಾಣೆಯಾಗಿದ್ದಾರೆಂದು ಥಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶನಿವಾರದಂದು ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್, ಕ್ರಮವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅತ್ತ ಶಹಾಪುರ ಕ್ಷೇತ್ರದ ಎನ್‌ಸಿಪಿ ಶಾಸಕ ದೌಲತ್ ದರೋಡಾ ನಿನ್ನೆ ಬೆಳಗ್ಗೆ ರಾಜಭವನಕ್ಕೆ ಭೇಟಿ ನೀಡಿದ ಬಳಿಕ ನಾಪತ್ತೆಯಾಗಿದ್ದಾರೆ. ಮಾಜಿ ಶಾಸಕ ಪಾಂಡುರಂಗ್ ಬರೋರಾ, ಶನಿವಾರ ಸಂಜೆ ಥಾಣೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ.
ಇಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ:
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ರಾಜ್ಯಪಾಲರ ಬಳಿ ತೆರಳುವಾಗ 114 ಶಾಸಕರ ಸಹಿಗಳಿರುವ ಪತ್ರ ತೆಗೆದುಕೊಂಡು ಹೋಗಬೇಕು. ಆದರೆ ಈ ಯಾವುದೇ ಪತ್ರವಿಲ್ಲದೇ ದೇವೇಂದ್ರ ಫಡ್ನವೀಸ್, ಪ್ರಮಾಣ ವಚನ ಸ್ವೀಕರಿಸಲು ಏಕಾಏಕಿ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಇದೀಗ ಎನ್‌ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು ಬೆಳಗ್ಗೆ 11:30ಕ್ಕೆ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ.