ಗೊಂಡಾ (ಉತ್ತರ ಪ್ರದೇಶ): ಗೊಂಡಾದ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಕಟ್ಟುನಿಟ್ಟಾದ ಸ್ವಚ್ಛತಾ ಕಾರ್ಯಕ್ರಮಗಳನ್ನು ಜಾರಿಗೆ ತಂದ ನಂತರವೂ ಆಸ್ಪತ್ರೆಯ ಆವರಣದಲ್ಲಿ ಪಾನ್ ತಿಂದು ಉಗುಳಿ ಆವರಣವನ್ನು ಕೊಳಕುಗೊಳಿಸಿದವರಿಗೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಎ.ಪಿ. ಮಿಶ್ರಾ ಅವಮಾನ ಪ್ರಮಾಣಪತ್ರ ನೀಡಿ ಅದರೊಂದಿಗೆ ದಂಡ ಸಹ ವಿಧಿಸಿದ್ದಾರೆ.
ಆಸ್ಪತ್ರೆ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಆಸ್ಪತ್ರೆ ಸಿಬ್ಬಂದಿ ಮತ್ತು ಜನರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಆಸ್ಪತ್ರೆ ಆಡಳಿತ ಮಂಡಳಿ ಪ್ರಮಾಣವಚನ ಸಹ ಬೋಧಿಸಿದೆ.
ಸ್ವಚ್ಛತೆ ಪ್ರಮಾಣವನ್ನು ಸ್ವೀಕರಿಸಿದ ಬಳಿಕವೇ ಪಾನ್ ಮಸಾಲ ತಿಂದು ಆಸ್ಪತ್ರೆ ಆವರಣದಲ್ಲಿ ಉಗುಳಿದ 10 ಜನರಿಗೆ ಎಲ್ಲರ ಮುಂದೆಯೇ ಅವಮಾನದ ಪ್ರಮಾಣ ಪತ್ರವನ್ನು ನೀಡುವುದರೊಂದಿಗೆ 200 ರೂಪಾಯಿ ದಂಡವನ್ನು ಜಡಿಯಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಉಗಿದು ಯಾರು ಗಲೀಜು ಮಾಡುತ್ತಾರೋ ಅಂತಹವರಿಗೆ ಈ ರೀತಿಯ ಪ್ರಮಾಣಪತ್ರವನ್ನು ನೀಡಿ ದಂಡ ವಿಧಿಸಿದರೆ ಮತ್ತೆ ಈ ಕಾರ್ಯ ಮಾಡಲು ಯಾರು ಮುಂದಾಗುವುದಿಲ್ಲ. ಇದರಿಂದ ಜನರು ತಮ್ಮ ತಪ್ಪನ್ನು ಬೇಗ ಅರಿತುಕೊಳ್ಳುತ್ತಾರೆ ಎಂಬುದೇ ಈ ಕ್ರಮದ ಉದ್ದೇಶವಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಡಾ. ಎ.ಪಿ ಮಿಶ್ರಾ ಅವರು ಆಸ್ಪತ್ರೆ ಆವರಣದಲ್ಲಿ ಉಗುಳಿದ್ದ ಆ್ಯಂಬುಲೆನ್ಸ್ ಚಾಲಕನಿಗೂ ಸಹ ಅವಮಾನ ಪ್ರಮಾಣಪತ್ರ ನೀಡಿ ಇನ್ನೂರು ರೂಪಾಯಿ ದಂಡ ವಿಧಿಸಲಾಗಿದೆ ಎಂದರು. ಅಲ್ಲದೇ ಆಸ್ಪತ್ರೆ ಆವರಣವನ್ನು ಕೊಳಕುಗೊಳಿಸಿದ 10 ಜನರಲ್ಲಿ 8 ಮಂದಿ ದಂಡದ ಹಣವನ್ನು ಕಟ್ಟಿದರು. ಇನ್ನಿಬ್ಬರ ಬಳಿ ಹಣವಿಲ್ಲದ ಕಾರಣ ಅವರನ್ನು ಕ್ಷಮಿಸಿ ಮುಂದೆ ಈ ರೀತಿಯ ತಪ್ಪು ಮಾಡದಂತೆ ತಿಳಿಸಿ ವಿನಾಯಿತಿ ನೀಡಲಾಯಿತು ಎಂದು ಮಾಹಿತಿ ನೀಡಿದ್ರು.
ಅಲ್ಲದೇ ಆಸ್ಪತ್ರೆಯು ಪ್ರತಿಯೊಬ್ಬರಿಗೂ ಸೇರಿದ್ದಾಗಿದ್ದು ಎಲ್ಲರೂ ಆವರಣವನ್ನು ಸ್ವಚ್ಛವಾಗಿಡಲು ಆಸ್ಪತ್ರೆಯ ಆಡಳಿತ ಮಂಡಳಿಗೆ ಸಹಾಯ ಮಾಡಬೇಕೆಂದು ಆಸ್ಪತ್ರೆ ಅಧೀಕ್ಷಕ ಡಾ. ಎ.ಪಿ. ಮಿಶ್ರಾ ಮನವಿ ಮಾಡಿದ್ದಾರೆ.