ಅನಂತ್‌ನಾಗ್(ಜಮ್ಮು ಮತ್ತು ಕಾಶ್ಮೀರ್): ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶನಿವಾರ ಸಂಜೆ ತಡರಾತ್ರಿ ನಾಗರಿಕನನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯನ್ನು ಕಂಗನ್ ಗ್ರಾಮದ 40 ವರ್ಷದ ಆಜಾದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.
"ಹತ್ಯೆಗೀಡಾದವರ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಹೀಗಾಗಿ ವಿವರಗಳನ್ನು ಕಲೆಹಾಕಲು ಕಾರ್ಯಾಚರಣೆ ಮುಂದುವರೆದಿದೆ ”ಎಂದು ಪುಲ್ವಾಮಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಶನಿವಾರ ರಾತ್ರಿ 9:20 ರ ಸುಮಾರಿಗೆ ಈ ಘಟನೆ ನಡೆದಿದೆ. ಉಗ್ರಗಾಮಿಗಳು ಅವನ ಮನೆಗೆ ನುಗ್ಗಿ ಅವನ ಮೇಲೆ ಅನೇಕ ಬಾರಿ ಗುಂಡು ಹಾರಿಸಿದ್ದಾರೆ.
ದಾರ್ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಅವರು ಮರಣಹೊಂದಿದ್ದನ್ನು ಖಚಿತಪಡಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.