ನವದೆಹಲಿ: ನಿತೀಶ್ ಕುಮಾರ್ ಸರ್ಕಾರ ಹಲವಾರು ಬಡಕುಟುಂಬಗಳಿಗೆ ಪಡಿತರ ಚೀಟಿ ಒದಗಿಸುವಲ್ಲಿ ವಿಫಲವಾಗಿದೆ. ಇದರಿಂದಾಗಿ ಬಿಹಾರದ 14.5 ಲಕ್ಷ ಜನರಿಗೆ ಕೇಂದ್ರ ಒದಗಿಸಿದ ಪಡಿತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಶುಕ್ರವಾರ ಆರೋಪಿಸಿದ್ದಾರೆ.
ಕೇಂದ್ರ ಪದೇ ಪದೇ ಮನವಿ ಮಾಡಿಕೊಂಡರೂ ಸಹ ಬಿಹಾರ ಸರ್ಕಾರ ಈ ವಿಷಯದಲ್ಲಿ ಯಾವುದೇ ರಚನಾತ್ಮಕ ಕ್ರಮ ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಪಡಿತರ ಚೀಟಿ ಇಲ್ಲದ ವ್ಯಕ್ತಿಗಳ ವಿವರಗಳನ್ನು ಕಳುಹಿಸುವಂತೆ ಕೇಂದ್ರ ಸರ್ಕಾರ ಈ ತಿಂಗಳ ಆರಂಭದಲ್ಲಿ ರಾಜ್ಯಗಳನ್ನು ಕೇಳಿತ್ತು. ಅದರಲ್ಲಿ ಆಶ್ಚರ್ಯವೆಂಬಂತೆ ಕೇವಲ ಬಿಹಾರದಿಂದಲೇ 14.5 ಲಕ್ಷ ಜನರ ಪಟ್ಟಿ ಹೊರಬಂದಿದೆ ಎಂದು ಪಾಸ್ವಾನ್ ತಿಳಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಸಮಾಜದ ಬಡ ಜನರಿಗೆ ಅನುಕೂಲವಾಗುವಂತೆ ಪಡಿತರ ಚೀಟಿ ನೀಡಿ ಪಡಿತರ ವಿತರಿಸುವಂತೆ ಸೂಚಿಸಿತ್ತು. ಹಾಗೆಯೇ ಪಡಿತರ ಚೀಟಿ ಇಲ್ಲದವರನ್ನು ಪಟ್ಟಿ ಮಾಡಿ ಆದಷ್ಟು ಬೇಗ ಚೀಟಿ ವಿತರಿಸುವಂತೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ರಾಜ್ಯಗಳಿಗೆ ಮನವಿ ಮಾಡಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಚಿರಾಗ್ ಪಾಸ್ವಾನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಖಂಡಿತವಾಗಿಯೂ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.