ಹೈದರಾಬಾದ್: ಸಂಪೂರ್ಣ ಪ್ರಜಾಪ್ರಭುತ್ವದ ಬೇಡಿಕೆಯೊಂದಿಗೆ ಹಾಂಕಾಂಗ್‌ನುದ್ದಕ್ಕೂ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ಬೀದಿ ಹೋರಾಟಗಳನ್ನು ಹತ್ತಿಕ್ಕಲು, ಈಗ ಚೀನಾ ಹೊಸ ವಿವಾದಾತ್ಮಾಕ ಕಾಯ್ದೆ ಜಾರಿಗೊಳಿಸಿದೆ. ಈ ಕಾಯ್ದೆಯನ್ನು ಅದು ರಾಷ್ಟ್ರೀಯ ಸುರಕ್ಷತಾ ಕಾಯ್ದೆ ಎಂದು ಕರೆದುಕೊಂಡಿದೆ.
ಈ ಹೊಸ ಕಾಯ್ದೆಯ ಪ್ರಕಾರ, ಚೀನಾದಿಂದ ಹೊರಗೆ ತೆರಳುವಂತೆ ಪ್ರೇರೆಪಿಸುವುದು, ಸರಕಾರದ ಅಸ್ತಿತ್ವವನ್ನು ನಿರಾಕರಿಸುವುದು, ಉಗ್ರಗಾಮಿ ಚಟುವಟಿಕೆ ಅಥವಾ, ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸುವುದು ಅಪರಾಧವೆಂದು ಘೋಷಿಸಲಾಗಿದೆ. ಈ ಕಾಯ್ದೆಯ ಮೂಲಕ ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಇನ್ನಷ್ಟು ಹತ್ತಿಕ್ಕಲು ಹಾಗೂ ಅರೆ ಸ್ವಾಯತ್ತ ಪ್ರದೇಶವಾಗಿರುವ ಹಾಂಕಾಂಗ್‌ನಲ್ಲಿ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಲು ಸಾಧ್ಯವಾಗಲಿದೆ ಎಂಬ ಭೀತಿ ಎದುರಾಗಲಿದೆ.
ಈ ಸರ್ವಾಧಿಕಾರಿ ಆಡಳಿತ ಈಗಾಗಲೆ, ಎಲ್ಲೆಡೆ ತನ್ನ ಆಕ್ರಮಣಕಾರಿ ನೀತಿ ಮುಂದುವರಿಸಿದ್ದು, ತೈವಾನ್, ಈಶಾನ್ಯ ಚೀನಾ ಸಮುದ್ರ, ಹಾಗೂ ಭಾರತದ ಮಧ್ಯದ ನಿಯಂತ್ರಣ ರೇಖೆ ಬಳಿ, ಇದರಿಂದಾಗಿ ಉದ್ವಿಗ್ನ ಸ್ಥಿತಿ ತಲೆದೋರಿದೆ. ಕಳೆದ ಒಂದು ವರ್ಷದಲ್ಲಿ, ಹಾಂಕಾಂಗ್‌ನಲ್ಲಿ 9,000ಕ್ಕೂ ಅಧಿಕ ನಾಯಕರನ್ನು ಹಾಗೂ ನಾಗರಿಕ ಹಕ್ಕು ಕಾರ್ಯಕರ್ತರನ್ನು ಚೀನಾ ಸರಕಾರದ ಹೋರಾಟ ನಡೆಸಿದ ಕಾರಣಕ್ಕಾಗಿ ಬಂಧಿಸಿದೆ. ಹೀಗೆ ಬಂಧಿಸಲ್ಪಟ್ಟ ಖೈದಿಗಳು ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಚೀನಾ ನಡೆಸುತ್ತಿರುವ ಗದಾ ಪ್ರಹಾರವನ್ನು ವಿಶ್ವದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರು.
ಕಳೆದ ಕೆಲ ವಾರಗಳಿಂದ, ಈ ರಾಷ್ಟ್ರೀಯ ಸುರಕ್ಷತಾ ಕಾಯ್ದೆ ವಿರುದ್ಧ ವಿಶ್ವಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿದೆ. ಆದರೆ, ಚೀನಾ, ಈ ಖಂಡನೆಯನ್ನು ತನ್ನ ಆಂತರಿಕ ವಿಷಯದಲ್ಲಿ ಉಳಿದ ದೇಶಗಳ ಮೂಗು ತೂರಿಸುವಿಕೆ ಎಂದು ಬಣ್ಣಿಸಿ, ಕಡೆಗಣಿಸುತ್ತಿದೆ. ಇಂದು ಬೆಳಗ್ಗೆ, ವರದಿಗಳ ಪ್ರಕಾರ, ಬೀಜಿಂಗ್‌ನಲ್ಲಿ ನಡೆದ ಚೀನಾದ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಯಿ ಸಮಿತಿ ಸಭೆಯಲ್ಲಿ, ಸರ್ವಾನುಮತದಿಂದ ರಾಷ್ಟ್ರವಿರೋಧಿ ಕಾಯ್ದೆಯನ್ನು ಅಂಗೀಕರಿಸಲಾಯಿತು. ಈ ಕಾಯ್ದೆಯನ್ನು ಇನ್ನು ಹಾಂಕಾಂಗ್‌ನ ಕಾನೂನಾಗಿ ಜಾರಿಗೊಳಿಸಲಾಗುತ್ತದೆ.
ಚೀನಾದ ಈ ನಡೆ ಈಗ, ಅಮೇರಿಕಾ ಸಂಯುಕ್ತ ಸಂಸ್ಥಾನ ಹಾಗೂ ಹಾಂಕಾಂಗ್ ನಡುವಣ ಸಂಬಂಧದಲ್ಲಿ ಹೊಸ ಉದ್ವಿಘ್ನತೆ ತಲೆದೋರುವಂತೆ ಮಾಡಿದೆ. ಈ ಎರಡೂ ದೇಶಗಳ ನಡುವಣ ಸಂಬಂಧ, ಇನ್ನಷ್ಟು ಹದಗೆಡುವಂತೆ ಮಾಡಿದೆ. ಅಮೇರಿಕಾದ ಗೃಹಸಚಿವಾಲಯ, ಬೀಜಿಂಗ್‌ನ ಈ ನಿರ್ಧಾರ, ಡೋನಾಲ್ಡ್ ಟ್ರಂಪ್ ಆಡಳಿತ, ಈ ಪ್ರದೇಶದ ಜೊತೆಗಿನ ಸಂಬಂಧವನ್ನು ಮತ್ತೆ ಪರಿಶೀಲಿಸುವಂತೆ ಮಾಡಿದೆ ಎಂದು ತಿಳಿಸಿದೆ. ವಿಶ್ವಸಂಸ್ಥೆಯಲ್ಲಿ ನಮೂದಿಸಲಾಗಿರುವ, ಸಿನೋ-ಬ್ರಿಟಿಷ್ ಒಪ್ಪಂದದ ಪ್ರಕಾರ ಚೀನಾ ಮಾಡಿರುವ ವಾಗ್ದಾನಗಳ ಉಲ್ಲಂಘನೆ ಎಂದು ಟ್ರಂಪ್ ಆಡಳಿತ ಟೀಕಿಸಿದೆ.
ಸೋಮವಾರ ರಾತ್ರಿ ಈ ಬಗ್ಗೆ ಹೇಳಿಕೆ ನೀಡಿರುವ ಅಮೇರಿಕಾದ ಗೃಹ ಕಾರ್ಯದರ್ಶಿ ಮೈಕ್ ಪೊಂಪಿಯೋ, ಚೀನಾ ಹಾಂಕಾಂಗ್ ಜನತೆಯ ವಿಶ್ವಾಸ ಮತ್ತೆ ಗೆಲ್ಲಬೇಕಾದರೆ, ಹಾಗೂ ಅಂತಾ ರಾಷ್ಟ್ರೀಯ ಸಮುದಾಯದ ಜೊತೆಗಿನ ಸಂಬಂಧ ಸರಿಪಡಿಸಿಕೊಳ್ಳಬೇಕಿದ್ದರೆ, ಅದು 1984ರ ಸಿನೋ-ಬ್ರಿಟಿಷ್ ಒಪ್ಪಂದದ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕಿದೆ. ಈ ಒಪ್ಪಂದವನ್ನು ವಿಶ್ವ ಸಂಸ್ಥೆಯಲ್ಲಿಯೇ ನೋಂದಾಯಿಸಲಾಗಿದೆ," ಎಂದಿದ್ದಾರೆ.
ಬ್ರಿಟನ್ ಹಾಗೂ ತೈವಾನ್‌ಗಳು ಈಗಾಗಲೆ ಹಾಂಕಾಂಗ್‌ನ ಪ್ರತಿಭಟನಾಕಾರರಿಗೆ ಹಾಗೂ ಪ್ರಜಾಪ್ರಭುತ್ವ ಪರ ಹೋರಾಟಗಾರರಿಗೆ ಬೆಂಬಲಿಸುವುದಾಗಿ ಭರವಸೆ ನೀಡಿವೆ. ಈ ಹೊಸ ಕಾಯ್ದೆ ಜಾರಿಗೊಂಡ ಬಳಿಕ, ಚೀನಾ ಗಡಿಪಾರು ಮಾಡುವ ನಾಯಕರಿಗೆ ರಾಜತಾಂತ್ರಿಕ ಆಶ್ರಯ ನೀಡುವುದಾಗಿ ಎರಡೂ ದೇಶಗಳು ತಿಳಿಸಿವೆ.
ಹಾಂಕಾಂಗ್‌ನ ಜನತೆ ಏಕೆ ಪ್ರತಿಭಟಿಸುತ್ತಿದ್ದಾರೆ..?
2019ರ ಜೂನ್‌ನಲ್ಲಿ ಹೇರಲ್ಪಟ್ಟ ಗಡಿಪಾರು ಕಾಯ್ದೆಯ ವಿರುದ್ಧ ಹಾಂಕಾಂಗ್‌ನಲ್ಲಿ ಸ್ವಯಂ ಪ್ರೇರಿತ ಪ್ರತಿಭಟನೆಗಳು, ದಿಡೀರ್ ಮುಷ್ಕರಗಳು ಆರಂಭಗೊಂಡಿದ್ದವು. 10 ಲಕ್ಷಕ್ಕೂ ಅಧಿಕ ಹಾಂಕಾಂಗ್ ನಿವಾಸಿಗಳು ಈ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಗಡೀಪಾರು ಕಾಯ್ದೆ, ದೇಶ ವಿರೋಧಿಗಳನ್ನು ಚೀನಾಗೆ ಗಡಿಪಾರು ಮಾಡುವ ಪ್ರಸ್ತಾಪ ಹೊಂದಿತ್ತು. ಹಸ್ತಾಂತರ ಸಂದರ್ಭದಲ್ಲಿ ಚೀನಾ ಒಪ್ಪಿಗೆ ಸೂಚಿಸಿದ್ದ ಒಂದು ದೇಶ-ಎರಡು ವ್ಯವಸ್ಥೆ ಹಾಗೂ ಹಾಂಕಾಂಗ್‌ನ ಸ್ವತಂತ್ರ್ಯ ನ್ಯಾಯಾಂಗ ವ್ಯವಸ್ಥೆಯ ಮೇಲಿನ ದೊಡ್ಡ ಅತಿಕ್ರಮಣ ಎಂಬುದು ಹಾಂಕಾಂಗ್ ನಿವಾಸಿಗಳ ಆಕ್ರೋಶವಾಗಿತ್ತು.
ಪ್ರತಿಭಟನೆ ಹಿನ್ನೆಲೆಯಲ್ಲಿ 2019ರ ಸೆಪ್ಟೆಂಬರ್ ನಲ್ಲಿ ಈ ಕರಡುಕಾಯ್ದೆಯನ್ನು ಚೀನಾ ಹಿಂದಕ್ಕೆ ತೆಗೆದುಕೊಂಡಿತು. ಇದೊಂದು ನಾಯಕರಿಲ್ಲದ ಸ್ವಯಂ ಪ್ರೇರಣೆಯ ಪ್ರತಿಭಟನೆಯಾಗಿತ್ತು. ಈ ಪ್ರತಿಭಟನೆಯ ಪರಿಣಾಮ ನವೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಪರ ಗುಂಪು 18 ಸ್ಥಾನಗಳ ಪೈಕಿ 17ರಲ್ಲಿ ವಿಜಯ ಸಾಧಿಸಿತು. ಪ್ರಜಾಪ್ರಭುತ್ವ ಪರ ಶಕ್ತಿಗಳನ್ನು ಬಗ್ಗು ಬಡಿಯಲು ಇದೀಗ ಚೀನಾ ಸರಕಾರ ಹೊಸ ಸುರಕ್ಷತಾ ಕಾಯ್ದೆ ಜಾರಿಗೊಳಿಸುತ್ತಿದೆ.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳೇನು..?
ಹಾಂಕಾಂಗ್‌ನಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ತಮ್ಮ ಹಕ್ಕುಗಳನ್ನು ಚೀನಾ ಮೊಟಕುಗೊಳಿಸಬಾರದು ಎಂಬ ಬೇಡಿಕೆಯೊಂದಿಗೆ ಬೀದಿಗಿಳಿದಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಗಳು ನಡೆದಿರುವುದು ಇದೇ ಮೊದಲು. ಅವರು ರಾಷ್ಟ್ರೀಯ ಸುರಕ್ಷತಾ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಈ ಕಾಯ್ದೆ ಭಯೋತ್ಪಾದನೆ ವಿರುದ್ಧದ ಅಸ್ತ್ರ ಎಂದು ಬಣ್ಣಿಸಲಾದರೂ, ಜನತೆ ಒಪ್ಪುತ್ತಿಲ್ಲ. ಪ್ರತಿಭಟನಾಕಾರರು ಎಲ್ಲಾ ಪ್ರಜಾಸತ್ತಾತ್ಮಕ ಹಕ್ಕುಗಳ ಬೇಡಿಕೆ ಮುಂದಿಡುತ್ತಿದ್ದಾರೆ.
ತಮ್ಮ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಅವರು ಮುಂದಿಟ್ಟಿದ್ದಾರೆ. ನಾಗಕರಿ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಬಗ್ಗೆ ತನಿಖೆ ನಡೆಸಲು ಸ್ವತಂತ್ರ್ಯ ಆಯೋಗ ರಚನೆಯ ಬೇಡಿಕೆ ಮುಂದಿಟ್ಟಿದ್ದಾರೆ. ಚೀನಾದಿಂದ ಪ್ರತ್ಯೇಕತೆ ದೊಡ್ಡ ಬೇಡಿಕೆಯಾಗಿಲ್ಲ. ರಾಷ್ಟ್ರೀಯ ಸುರಕ್ಷತಾ ಕಾಯ್ದೆಯ ಅಂತಿಮ ಪಠ್ಯ ಇನ್ನೂ ದೊರೆತಿಲ್ಲ. ಆದರೆ ಮೂಲಗಳ ಪ್ರಕಾರ, ಒಂದೊಮ್ಮೆ ಈ ಕಾಯ್ದೆ ಜಾರಿಯಾದರೆ, ಚೀನಾ ಹಾಂಕಾಂಗ್ ಮೇಲಣ ತನ್ನ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಳ್ಳಲಿದೆ. ಹಾಂಕಾಂಗ್‌ನ ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಸುರಕ್ಷತೆ ಮೇಲಣ ಪಠ್ಯವನ್ನು ಅದು ನಿರ್ವಹಿಸಲಿದೆ. ಹಾಂಕಾಂಗ್ ಸರಕಾರವೇ ಈ ಕಾಯ್ದೆಯನ್ನು ಜಾರಿಗೊಳಿಸಲಿದೆ. ಆದರೆ, ಚೀನಾದ ಕ್ಸಿ ಆಡಳಿತ, ಕೆಲವು ನೆಪಗಳನ್ನೆತ್ತಿ, ಹಾಂಕಾಂಗ್‌ನ ಅಧಿಕಾರಿಗಳನ್ನು ಪದಚ್ಯುತಗೊಳಿಸಬಹುದು.
ಒಂದು ದೇಶ-ಎರಡು ವ್ಯವಸ್ಥೆ
ಬ್ರಿಟಿಷ್ ವಸಾಹತು ಭಾಗವಾಗಿದ್ದ ಹಾಂಕಾಂಗ್ ಅನ್ನು ಚೀನಾಗೆ 1997ರಲ್ಲಿ ಹಸ್ತಾಂತರಿಸಲಾಯಿತು. ಈ ಹಸ್ತಾಂತರದ ಪ್ರಮುಖ ಷರತ್ತು ಒಂದು ದೇಶ-ಎರಡು ವ್ಯವಸ್ಥೆ. ಈ ಹಸ್ತಾಂತರದ ಸಂದರ್ಭದಲ್ಲಿ ಹಾಂಕಾಂಗ್ ಗೆ ವಿಶೇಷ ಹಕ್ಕುಗಳು ಹಾಗೂ ಸ್ವಾಯತ್ತತೆ ನೀಡಲಾಯಿತು. ಹಾಂಕಾಂಗ್ ವಿಶೇಷ ಸ್ವಾಯತ್ತ ಪ್ರದೇಶ (ಎಚ್‌ಕೆಎಸ್‌ಎಆರ್) ತನ್ನದೇ ಆದ ಪ್ರತ್ಯೇಕ ನ್ಯಾಯಾಲಯ, ಹಾಗೂ ಕಾನೂನು ವ್ಯವಸ್ಥೆ ಹೊಂದಿದೆ. ಇದು ಚೀನಾದ ಆಧೀನಕ್ಕೆ ಒಳಪಟ್ಟಿಲ್ಲ.
ಇದು ಹಾಂಕಾಂಗ್ ಜನತೆಗೆ ವಾಕ್ ಸ್ವಾತಂತ್ರ್ಯ ಹಾಗೂ ಗುಂಪು ಸೇರುವ ಸ್ವಾತಂತ್ರ್ಯ ನೀಡಿದೆ. ಹಾಂಕಾಂಗ್‌ನಲ್ಲಿ ಪ್ರತ್ಯೇಕ ಕಾನೂನು ವ್ಯವಸ್ಥೆ ಇದು, ಅದು ಅಲ್ಲಿನ ಸಂವಿಧಾನದಂತೆ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಎರಡು ದಶಕಗಳಿಂದಲೂ ಹಾಂಕಾಂಗ್ ಈ ಕಾನೂನು ಮೂಲಕ ಆಡಳಿತ ನಡೆಸುತ್ತಿದೆ. ಚೀನಾಗೆ ಹಸ್ತಾಂತರ ಗೊಂಡ ಎರಡು ದಶಕಗಳ ಬಳಿಕವೂ ಹಾಂಕಾಂಗ್‌ನಲ್ಲಿ ಮಾಧ್ಯಮ ಸ್ವಾತಂತ್ರ್ಯ, ಸ್ವತಂತ್ರ್ಯ ನ್ಯಾಯಾಲಯ ವ್ಯವಸ್ಥೆ, ಇದ್ದು, ಇವಾವುವೂ ಚೀನಾದ ಹತೋಟಿಗೆ ಒಳಪಟ್ಟಿರಲಿಲ್ಲ.
ಹಾಂಕಾಂಗ್‌ನ ಸ್ವತಂತ್ರ್ಯ ನ್ಯಾಯಾಲಯ ವ್ಯವಸ್ಥೆ, ಹಾಗೂ ಅಲ್ಲಿನ ಸ್ವಾಯತ್ತ ಆಡಳಿತ ವ್ಯವಸ್ಥೆಯನ್ನು ಹದಗೆಡಿಸುವ ಸಲುವಾಗಿಯೇ ಚೀನಾ ಗಡೀಪಾರು ಶಾಸನ ಜಾರಿಗೆ ತರುತ್ತಿದೆ. ಜೊತೆಗೆ ಈ ಶಾಸನದ ಮೂಲಕ ತನ್ನ ಟೀಕಾಕಾರರ ವಿರುದ್ಧ ಚೀನಾ ಕತ್ತಿಮಸೆಯುತ್ತಿದೆ. ಇದೀಗ ರಾಷ್ಟ್ರೀಯ ಸುರಕ್ಷತಾ ಕಾಯ್ದೆ ಮೂಲಕ, ಚೀನಾ ತನ್ನ ಟೀಕಾಕಾರರನ್ನು ನಿರ್ಲಕ್ಷಿಸಿ ಮುನ್ನಡೆದಿದೆ. ಈ ಕಾಯ್ದೆ ಜಾರಿ ಮೂಲಕ, ಚೀನಾ ತನ್ನ ವಿರೋಧಿಗಳಿಗೆ ನೀಡಿರುವ ಸಂದೇಶವೆಂದರೆ, ಯಾವುದೇ ಪ್ರತಿಭಟನೆಗಳಿಗಾಗಲಿ ಅಥವಾ, ಬೆದರಿಕೆಗಳಿಗಾಗಲಿ, ಅಥವಾ ಅಂತಾರಾಷ್ಟ್ರೀಯ ಟೀಕೆಗಳಿಗೆ ತಾನು ಕವಡೆ ಕಾಸಿನ ಬೆಲೆಯನ್ನೂ ನೀಡುವುದಿಲ್ಲ. ವಿಶೇಷವೆಂದರೆ, ಬ್ರಿಟನ್-ಚೀನಾ ನಡುವೆ ಹಾಂಕಾಂಗ್ ಹಸ್ತಾಂತರ ಸಂಬಂಧ ಒಪ್ಪಂದ ಜಾರಿಯ ವಾರ್ಷಿಕೋತ್ಸವ ಸಂದರ್ಭದಲ್ಲೇ ಈ ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ.
ಏಕೆ ಮತ್ತು ಹೇಗೆ ಅಮೇರಿಕಾ ಪ್ರತಿ ಏಟು ನೀಡುತ್ತಿದೆ..?
ಒಂದು ಅಂತಾರಾಷ್ಟ್ರೀಯ ನಗರವಾಗಿ, ಹಾಂಕಾಂಗ್, ಭಾರತ ಹಾಗೂ ಅಮೇರಿಕಾ ಸೇರಿದಂತೆ, ವಿಶ್ವದ ನಾನಾ ದೇಶಗಳ ಜೊತೆಗೆ, ಅತ್ಯಂತ ನಿಕಟ ಹೂಡಿಕೆ ಸಂಬಂಧ ಹೊಂದಿದೆ. ೧೯೯೨ರಲ್ಲಿ ಅಮೇರಿಕಾ ಹಾಂಕಾಂಗ್‌ಗೆ, ವಿಶೇಷ ಸ್ಥಾನಮಾನವನ್ನು ಹಾಂಕಾಂಗ್ ನೀತಿ ಕಾಯ್ದೆ ಮೂಲಕ ನೀಡಿದೆ. ಈ ಕಾಯ್ದೆ, ಹಾಂಕಾಂಗ್‌ಗೆ ಅನನ್ಯ ಅವಕಾಶಗಳನ್ನು ನೀಡಿದೆ. ಈ ಅನನ್ಯ ಅವಕಾಶ, ಹಾಂಕಾಂಗ್ ಒಂದು ದೇಶ-ಎರಡು ವ್ಯವಸ್ಥೆ ಯನ್ನು ಕಾಯ್ದುಕೊಳ್ಳುವವರೆಗೆ ಮುಂದುವರಿಯುತ್ತದೆ. ಆದರೆ ಇದೀಗ ಚೀನಾ, ಹೊಸ ಕಾಯ್ದೆ ಜಾರಿಗೊಳಿಸುವ ಮೂಲಕ, ಒಂದು ದೇಶ -ಒಂದು ವ್ಯವಸ್ಥೆ ಕಲ್ಪನೆ ಜಾರಿಗೊಳಿಸಲು ಹೊರಟಿದೆ.
ಇದಕ್ಕೆ ಪ್ರತಿಯಾಗಿ ಟ್ರಂಟ್ ಆಡಳಿತ, ಹಾಂಕಾಂಗ್‌ಗೆ ಅಮೇರಿಕಾ ಮೂಲದ ರಕ್ಷಣಾ ಉಪಕರಣಗಳ ರಫ್ತು ನಿಲ್ಲಿದೆ. ಜೊತೆಗೆ, ಅಮೇರಿಕಾ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಆಧಾರಿತ ಯುದ್ದೋಪಕರಣಗಳ ರಫ್ತು ಕೂಡಾ ನಿಲ್ಲಿಸಲು ನಿರ್ಧರಿಸಿದೆ. ಇದೇ ನೀತಿಯನ್ನು ಈವರೆಗೆ ಅಮೇರಿಕಾ ಚೀನಾ ವಿಷಯದಲ್ಲಿ ಹೊಂದಿತ್ತು. "ಅಮೇರಿಕಾದ ರಾಷ್ಟ್ರೀಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ, ನಾವು ಚೀನಾ ಹಾಗೂ ಹಾಂಕಾಂಗ್ ವಿಷಯದಲ್ಲಿ ಪ್ರತ್ಯೇಕ ನೀತಿಗಳನ್ನು ಹೊಂದಿರಲು ಸಾಧ್ಯವಿಲ್ಲ. ನಾವು ಅಭಿವೃದ್ಧಿ ಪಡಿಸಿದ ಉಪಕರಣಗಳು, ಚೀನಾದ ಸೈನ್ಯ ಪೀಪಲ್ಸ್ ಲಿಬರೇಷನ್ ಆರ್ಮಿ ಕೈಸೇರುವಂತೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಚೀನಾದ ಸೈನ್ಯದ ಮುಖ್ಯ ಉದ್ದೇಶ, ಚೀನಾದ ಕಮ್ಯೂನಿಷ್ಟ್ ಆಡಳಿತದ ಸರ್ವಾಧಿಕಾರವನ್ನು ಎಲ್ಲೆಡೆ ಎತ್ತಿಹಿಡಿಯುವಂತೆ ಮಾಡುವುದಾಗಿದೆ," ಎನ್ನುತ್ತಾರೆ ಪೊಂಪಿಯೋ.
ಚೀನಾ ಅಮೇರಿಕಾದ ಪ್ರಜೆಗಳಿಗೆ ವೀಸಾವನ್ನು ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡಿದೆ. ಇದು ಎರಡೂ ದೇಶಗಳ ನಡುವಣ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ, ಕಳೆದ ಕೆಲ ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದು ಉಭಯ ದೇಶಗಳ ನಡುವಣ ನಡೆದ ಸಣ್ಣ ವ್ಯಾಪಾರಿ ಯುದ್ಧವನ್ನೂ ಒಳಗೊಂಡಿದೆ. "ನಮ್ಮ ಗುರಿ ಚೀನಾದ ಆಡಳಿತವೇ ಹೊರತು ಜನರಲ್ಲ. ಆದರೆ ಈಗ ಬೀಜಿಂಗ್ ಹಾಂಕಾಂಗ್‌ನ ಪರಿಸ್ಥಿತಿಯನ್ನು ನಿರ್ವಹಿಸುವುದನ್ನು ನೋಡಿದರೆ, ಅದು, ಒಂದು ದೇಶ-ಒಂದು ವ್ಯವಸ್ಥೆ ಎಂಬ ಕಲ್ಪನೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆಯೆ ಎಂದು ಅನಿಸುತ್ತಿದೆ. ಹಾಂಕಾಂಗ್‌ನ ವಾಸ್ತವ ಸ್ಥಿತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ, ಅಮೇರಿಕಾ ಸಂಯುಕ್ತ ಸಂಸ್ಥಾನ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ, ಅನಿವಾರ್ಯವಾದರೆ, ಇನ್ನಷ್ಟು ಕ್ರಮಗಳಿಗೆ ಮುಂದಾಗುತ್ತೇವೆ," ಎನ್ನುತ್ತಾರೆ ಪೊಂಪಿಯೋ.