ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸದ್ಯ ತಮ್ಮ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಚಿದು ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಎನ್.ವಿ ರಮಣ ನೇತೃತ್ವದ ಪೀಠಕ್ಕೆ ತುರ್ತು ವಿಚಾರಣೆಗೆ ಮನವಿ ಮಾಡಿಕೊಂಡಿದ್ದಾರೆ. ಸೋಮವಾರದಿಂದ ದಸರಾ ನಿಮಿತ್ತ ಕೋರ್ಟ್ ಕಲಾಪಗಳಿಗೆ ರಜೆ ಇರುವುದರಿಂದ ಶೀಘ್ರ ವಿಚಾರಣೆ ಅಗತ್ಯವಿದೆ ಎಂದು ಸಿಬಲ್ ಪೀಠಕ್ಕೆ ಮನವರಿಕೆ ಮಾಡಿದ್ದಾರೆ. ಆದರೆ ಈ ಮನವಿಯನ್ನು ಪುರಸ್ಕರಿಸುವ ಅಧಿಕಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮಾತ್ರ ಹೊಂದಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಕೇಸ್... 'ಕೈ' ಮಾಜಿ ಸಚಿವ ಚಿದಂಬರಂಗಿಲ್ಲ ಜಾಮೀನು!
ಎನ್.ವಿ.ರಮಣ ನೇತೃತ್ವದ ಪೀಠದಲ್ಲಿ ಸಂಜೀವ್ ಖನ್ನಾ ಹಾಗೂ ಕೃಷ್ಣ ಮುರಾರಿ ಸದಸ್ಯರಾಗಿದ್ದಾರೆ. ತುರ್ತು ವಿಚಾರಣೆಗೆ ಮನವಿ ಮಾಡಿರುವುದರಿಂದ ಮುಖ್ಯ ನ್ಯಾಯಮೂರ್ತಿಯ ಆದೇಶದಂತೆ ಅರ್ಜಿ ವಿಚಾರಣೆಯನ್ನು ಈ ಪೀಠ ಕೈಗೆತ್ತಿಕೊಳ್ಳಲಿದೆ.
ದೆಹಲಿ ಹೈಕೋರ್ಟ್ನಲ್ಲಿ ಸೆ.30ರಂದು ಚಿದಂಬರಂ ಜಾಮೀನು ಅರ್ಜಿ ವಜಾಗೊಂಡಿತ್ತು. ಅರ್ಜಿದಾರ ಪ್ರಮುಖ ರಾಜಕಾರಣಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು.