ರಾಯಪುರ(ಛತ್ತೀಸ್ಗಡ): ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಅವರ ಸೂಚನೆಯ ಮೇರೆಗೆ ತಕ್ಷಣ ಕ್ರಮ ಕೈಗೊಂಡ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಸೋನಮನಿ ಬೋರಾ, 12 ವರ್ಷದ ಬಾಲಕಿ ಜಮಾಲೋ ಮಡಕಂ ನ ಸಾವಿನ ಹಿನ್ನೆಲೆ ಸಂಬಂಧಪಟ್ಟ ಉದ್ಯೋಗದಾತ ಮತ್ತು ತೆಲಂಗಾಣದ ಏಜೆಂಟ್ ಕುಮಾರಿ ಸುನೀತಾ ಮಡ್ಕಾಮಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿದ್ದಾರೆ.
ಮೂಲಗಳ ಪ್ರಕಾರ, ಜಮಲೋ ಛತ್ತೀಸಗಡದ ಬಿಜಾಪುರ ಜಿಲ್ಲೆಯ ಅಡೆಡ್‌ನಲ್ಲಿರುವ ತನ್ನ ಮನೆಗೆ ತಲುಪಲು ಮೂರು ದಿನಗಳ ಕಾಲ 11 ಮಂದಿ ಜೊತೆ 100 ಕಿ. ಮೀ. ಗಿಂತಲೂ ಹೆಚ್ಚು ದೂರ ಕ್ರಮಿಸಿದ್ದಾಳೆ. ಇನ್ನೇನು ಮನೆ ತಲುಪಲು ಕೇವಲ 11 ಕಿಲೋಮೀಟರ್ ದೂರ ಬಾಕಿಯಿದೆ ಎನ್ನುವಷ್ಟರಲ್ಲಿ ದೇಹದಲ್ಲಿನ ನೀರಿನಂಶ ಮತ್ತು ಲ್ಯಾಕ್ಟೋಸಿಸ್ ಕೊರತೆಯಿಂದಾಗಿ ಮೃತಪಟ್ಟಿದ್ದಾಳೆ.
ಕಾರ್ಮಿಕ ತನಿಖಾಧಿಕಾರಿಯ ಪ್ರತ್ಯೇಕ ತನಿಖೆಯ ನಂತರ, ಕುಮಾರಿ ಸುನೀತಾ ಮಡ್ಕಾಮಿ ಕಾರ್ಮಿಕ ಇಲಾಖೆಗೆ ಯಾವುದೇ ಮಾಹಿತಿ ನೀಡದೆ 5 ಅಪ್ರಾಪ್ತ ಮಕ್ಕಳನ್ನು ತೆಲಂಗಾಣದ ಮೆಣಸಿನಕಾಯಿ ತೋಟದಲ್ಲಿ ಕೂಲಿಗೆಂದು ಕರೆದೊಯ್ದಿದ್ದಾಳೆ. ಇದು ಅಕ್ರಮ ಮಾನವ ಕಳ್ಳಸಾಗಣೆ ವಿಭಾಗಕ್ಕೆ ಒಳಪಟ್ಟಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ.ಗಳನ್ನು ಜಮಾಲೋ ಮಡಕಂ ಅವರ ಕುಟುಂಬಕ್ಕೆ ತಕ್ಷಣದ ಸಹಾಯವಾಗಿ ಮಂಜೂರು ಮಾಡಿದ್ದರು. ನಂತರ ಮತ್ತೆ ಮುಖ್ಯಮಂತ್ರಿಯ ನಿಧಿಯಿಂದ 4 ಲಕ್ಷ ರೂ. ಗಳ ಹೆಚ್ಚುವರಿ ಅನುಮೋದನೆ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿಜಾಪುರದ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.