ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಯೋಜನೆ ಚಂದ್ರಯಾನ -2 ಉಡ್ಡಯನಕ್ಕೆ ಕ್ಷಣಗಣನೆ ಶುರುವಾಗಿದೆ. ನೂರಾರು ವಿಜ್ಞಾನಿಗಳ, ಕೋಟ್ಯಂತರ ಭಾರತೀಯರ ಬಾಹ್ಯಾಕಾಶ ಕನಸುಗಳನ್ನು ಹೊತ್ತ ಸ್ವದೇಶಿ ನಿರ್ಮಿತ ಜಿಎಸ್‌ಎಲ್‌ವಿ ಮಾರ್ಕ್- 3 ರಾಕೆಟ್ 'ವಿಕ್ರಮ್' ಲ್ಯಾಂಡರ್ ಹಾಗೂ 'ಪ್ರಗ್ಯಾನ್' ರೋವರ್‌ಗಳನ್ನು ಹೊತ್ತು ಜುಲೈ 15ರ ನಸುಕಿನ 2 ಗಂಟೆ 51 ನಿಮಿಷಕ್ಕೆ ಸರಿಯಾಗಿ ಆಂಧ್ರದ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿದು ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ.
ಭೂ ಕಕ್ಷೆಯ ಸುತ್ತ ಗಿರಿಕಿ ಹೊಡೆಯುತ್ತಿರುವ ಚಂದ್ರ ಕವಿಗಳಿಗೆ ಕಾವ್ಯದ ಸ್ಪೂರ್ತಿ, ಮಕ್ಕಳಿಗೆ ಅಕ್ಕರೆಯ ಚಂದ ಮಾಮ. ವಿಜ್ಞಾನಿಗಳಿಗೆ ಅಚ್ಚರಿಯ ಆಗರ. ಚಂದ್ರಯಾನದ-2 ರ ಮುಖ್ಯ ಉದ್ದೇಶ ಚಂದ್ರನ ಮೇಲಿನ ಕ್ಯಾಲ್ಸಿಯಂ, ಮೆಗ್ನಿಷಿಯಂ, ಕಬ್ಬಿಣದಂತಹ ಖನಿಜಾಂಶಗಳ ಕುರಿತು ಅಧ್ಯಯನ ನಡೆಸುವುದು. ಇದಕ್ಕೂ ಮುಖ್ಯವಾಗಿ ಚಂದ್ರನ ಮೇಲಿನ ನೀರಿನ ಅಸ್ತಿತ್ವದ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸುವುದು, ಜೊತೆಗೆ ಇಂಧನದ ಕುರುಹುಗಳನ್ನು ಖಚಿತ ಪಡೆಸಿಕೊಳ್ಳುವುದು ವಿಜ್ಞಾನಿಗಳ ಗುರಿಯಾಗಿದೆ.
ಅಮೆರಿಕದ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಎಡ್ವಿನ್ ಆಲ್ಡರಿನ್ 1969 ರ ಜುಲೈ 20 ರಂದು ಪ್ರಥಮ ಬಾರಿಗೆ ಚಂದ್ರನ ಅಂಗಳದಲ್ಲಿ ಕಾಲಿಟ್ಟರು. ಇದಾದ ಬಳಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ-ರಷ್ಯಾ ನಡುವೆ ಶೀತಲ ಸಮರವೇ ಏರ್ಪಟ್ಟು, ಈ ರಾಷ್ಟ್ರಗಳೊಂದಿಗೆ ಜಪಾನ್, ಚೀನಾ, ಯುರೋಪ್ ರಾಷ್ಟ್ರಗಳು ಒಂದೊಂದಾಗಿ ಚಂದ್ರಯಾನಕ್ಕೆ ಪೈಪೋಟಿಗಿಳಿದು ಧುಮುಕಿದವು. ಮತ್ತೊಂದೆಡೆ ಭಾರತ ಸುಮ್ಮನೆ ಕೂರದೆ ವಿಭಿನ್ನ ರೀತಿಯಲ್ಲಿ ತನ್ನ ಚಂದ್ರಾನ್ವೇಷಣೆಯ ರೂಪುರೇಷೆಗಳನ್ನು ಹೆಣೆಯಿತು. ವಿಶ್ವದಲ್ಲೇ ಮೊದಲ ಪ್ರಯತ್ನದಲ್ಲಿ ಚಂದ್ರಯಾನ ಯಶಸ್ವಿಗೊಳಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಿದೆ.
2008ರಲ್ಲಿ ಚಂದ್ರಯಾನ - 1 ರ ಮೂಲಕ ಕಳುಹಿಸಲಾದ ರೋವರ್ ಚಂದ್ರನ ಅಂಗಳದಲ್ಲಿ ಒಂದು ವರ್ಷದ ಕಾಲ ವಿವಿಧ ಅಧ್ಯಯನ ನಡೆಸಿ ಚಂದ್ರನಲ್ಲಿ ನೀರಿನ ಕಣಗಳ ಇರುವಿಕೆಯ ಬಗ್ಗೆ ಸಾಕ್ಷ್ಯಗಳನ್ನು ನೀಡಿತ್ತು. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ದಕ್ಕಿದ ಬಹುದೊಡ್ಡ ಕೀರ್ತಿ. 2008ರ ಚಂದ್ರಯಾನ-1 ರ ಮುಂದುವರಿದ ಭಾಗವಾಗಿ ಚಂದ್ರಯಾನ-2 ಕೈಗೆತ್ತಿಕೊಳ್ಳಲಾಗಿದೆ. ಚಂದ್ರನ ಅಂಗಳದಲ್ಲಿ ಸುಗಮವಾಗಿ ಇಳಿಯುವ ಸವಾಲಿನ ಕಾರ್ಯಕ್ಕೆ ನೂತನ ತಂತ್ರಜ್ಞಾನ ಬಳಸಲಾಗಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಪರಿಕರಗಳನ್ನು ಇಳಿಸಲಿದೆ. ಮೊದಲು ಲ್ಯಾಂಡರ್ ಬಾಗಿಲು ತೆರೆದು ರೋವರ್ ಹೊರ ಬರಲಿದೆ. ರೋವರ್ ಪ್ರತಿ ಸೆಕೆಂಡಿಗೆ 1 ಸೆ.ಮೀ ವೇಗದಲ್ಲಿ ಚಲಿಸಿ ಚಂದ್ರನ 500 ಮೀ.ದೂರದ ಮೇಲ್ಮೈನಲ್ಲಿ ವಿವಿಧ ಪ್ರಯೋಗಗಳನ್ನು ನಡೆಸಿ ಚಿತ್ರಗಳನ್ನು ಸೆರೆಹಿಡಿದು ಇಸ್ರೋಗೆ ಕಳುಹಿಸುತ್ತದೆ. ಪ್ರಪಂಚದ ಹಲವು ರಾಷ್ಟ್ರಗಳು ಚಂದ್ರನ ಅಧ್ಯಯನಕ್ಕೆ ನೂರಾರು ನೌಕೆಗಳನ್ನು ಕಳುಹಿಸಿವೆ. ಆದರೆ ಯಶಸ್ಸು ಸಿಕ್ಕಿದ್ದು ಬೆರಳೆಣಿಕೆಯ ರಾಷ್ಟ್ರಗಳಿಗೆ ಮಾತ್ರ. ಚಂದ್ರನ ಮೇಲೆ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಯಶಸ್ವಿಯಾಗಿ ಗಗನ ನೌಕೆ ಇಳಿಸಿವೆ. ಚಂದ್ರಯಾನ-1 ಮೂಲಕ ಭಾರತ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಂದ್ರಯಾನ-2 ಯೋಜನೆಗೆ ಸಾಕಷ್ಟು ಸವಾಲುಗಳು ಎದುರಾಗಿವೆ.
ಆರ್ಬಿಟ್‌ನಲ್ಲಿ ಅಳವಡಿಸಲಾದ ಸಂಚಲನಾ ವ್ಯವಸ್ಥೆಯನ್ನು ಬಳಸಿ ಕಕ್ಷೆ ಎತ್ತರಿಸುವ ಮತ್ತು ಪಥ ಬದಲಿಸುವ ಕಾರ್ಯಾಚರಣೆ ಮತ್ತು ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಕೆಲಸ ವಿಜ್ಞಾನಿಗಳಿಗೆ ಸವಾಲಿನದ್ದಾಗಿದೆ. ಇಸ್ರೋದ ಇತಿಹಾಸದಲ್ಲೇ ಇವೆರಡೂ ಕ್ಲಿಷ್ಟಕರ ಕಾರ್ಯಾಚರಣೆಗಳು. ಚಂದ್ರನ ಮೇಲ್ಮೈನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇದುವರೆಗೂ ಯಾವುದೇ ರಾಷ್ಟ್ರ ತನ್ನ ಗಗನ ನೌಕೆಯನ್ನು ಸುರಕ್ಷಿತವಾಗಿ (ಸಾಫ್ಟ್ ಲ್ಯಾಂಡಿಂಗ್) ಇಳಿಸಿಲ್ಲ. ಒಂದು ವೇಳೆ ಭಾರತದ ಚಂದ್ರಯಾನ-2ನ ರೋವರ್ ಯಶಸ್ವಿಯಾಗಿ ಇಳಿದರೆ ಬಾಹ್ಯಾಕಾಶದಲ್ಲಿ ಬಹುದೊಡ್ಡ ಕ್ರಾಂತಿಯಾಗಲಿದೆ. ಇಂತಹ ಮಹತ್ವದ ಸಾಧನೆಗೆ ಭಾರತದ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.