ನವದೆಹಲಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರಿಗೆ ಅಂಟಿಕೊಂಡಿರುವ 'ಚಾಯ್ವಾಲಾ ಹೇಳಿಕೆ' ಕಳಂಕವು ಸದ್ಯಕ್ಕೆ ದೂರವಾಗುವಂತೆ ಕಾಣುತ್ತಿಲ್ಲ.
2014ರ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಾಯ್ವಾಲಾ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ವಿಧಿ 370ಅನ್ನು ರದ್ದುಗೊಳಿಸಿರುವ ಕುರಿತು ಈಟಿವಿ ಭಾರತಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ಕೆಟ್ಟದಾಗಿ ಬಿಂಬಿಸಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೋದಿ ಅವರು ಚಾಯ್ವಾಲಾ ಹಾಗಾಗಿ ಅವರು ಇಲ್ಲಿ ಟೀ ಕೊಡಲಿ ಎಂದು ನಾನು ಹೇಳಿಲ್ಲ. ಬದಲಾಗಿ, ಮೋದಿ ಅವರು ಬೇಕಿದ್ದರೆ ತಾಲ್ಕಾತೋರಾ ಮೈದಾನಕ್ಕೆ ಬಂದು ಟೀ ಅಂಗಡಿ ಇಡಲಿ, ಬೇಕಿದ್ದರೆ ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದಿದ್ದೆ ಎಂದು ಸ್ಪಷ್ಟನೆ ನೀಡಿದರು.
ನೀವು ಕಾಶ್ಮೀರ ವಿಷಯಕ್ಕಷ್ಟೆ ಸೀಮಿತವಾಗಿ ಎಂದು ಸಂದರ್ಶಕರಿಗೆ ಅಯ್ಯರ್ ಹೇಳಿದಾಗ, ಸಂದರ್ಶಕರು ನಾನು ಯಾವ ಪ್ರಶ್ನೆ ಕೇಳಬೇಕೆಂದು ನೀವು ನನಗೆ ನಿರ್ದೇಶನ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಆಗ ಅಯ್ಯರ್ ಅವರು ತಮ್ಮ ಮಾತನ್ನು ತಮಾಷೆ ಕಡೆಗೆ ತಿರುಗಿಸಿ ಸನ್ನಿವೇಶವನ್ನು ತಿಳಿಗೊಳಿಸಿದರು.