ಕೋಲ್ಕತ್ತಾ (ಪಶ್ಚಿಮ ಬಂಗಾಳ): ಗಡಿಯಾಚೆಗೆ ಹಸು ಕಳ್ಳಸಾಗಣೆ ದಂಧೆಯಲ್ಲಿ ಟಿಎಂಸಿ ಯುವ ಮುಖಂಡ ವಿನಯ್ ಕುಮಾರ್ ಮಿಶ್ರಾ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿ ವಿನಯ್ ನಾಪತ್ತೆಯಾಗಿದ್ದು, ಅಸನ್ಸೋಲ್‌ನ ವಿಶೇಷ ಸಿಬಿಐ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ ಎಂದು ತಿಳಿದು ಬಂದಿದೆ.
ತೃಣಮೂಲ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಮಿಶ್ರಾ, ಗೋವು ಕಳ್ಳಸಾಗಣೆಯಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಹಲವು ಬಾರಿ ಸಮನ್ಸ್ ನೀಡಿತ್ತು. ಆದರೂ ಅವರು, ಯಾವುದೇ ವಿಚಾರಣೆಗೆ ಹಾಜರಾಗಲಿಲ್ಲ. ಜನವರಿ 19 ರಂದು ಕೊನೆಯ ಬಾರಿ ನೋಟಿಸ್ ನೀಡಿದ್ದು, ಹಾಜರಾಗದಿದ್ದರೆ ಬಂಧಿಸುವುದಾಗಿ ಅಧಿಕಾರಿಗಳು ಸೂಚಿಸಿದ್ದರು.
ಸಿಬಿಐ ಇತ್ತೀಚೆಗೆ ಕೋಲ್ಕತ್ತಾದ ರಶ್ಬಿಹಾರಿ ಅವೆನ್ಯೂ ಪ್ರದೇಶದಲ್ಲಿರುವ ಮಿಶ್ರಾ, ನಿವಾಸದ ಮೇಲೆ ದಾಳಿ ನಡೆಸಿತ್ತು. ಆದರೆ ಅವರು ಎಸ್ಕೇಪ್ ಆಗಿದ್ದ ಕಾರಣಕ್ಕೆ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.
ಅಂತಾರಾಷ್ಟ್ರೀಯ ಜಾನುವಾರು ಕಳ್ಳ ಸಾಗಣೆದಾರರಿಂದ ಲಂಚ ಪಡೆದು ಕೆಲವು ಗಡಿ ಭದ್ರತಾ ಪಡೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಸೇರಿದಂತೆ ಆರು ಜನರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು.
ಇತ್ತೀಚೆಗಷ್ಟೇ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಹಲವರು ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ. ಈ ಮಧ್ಯೆ, ಪಕ್ಷದ ಮುಖಂಡರ ಮೇಲೆ ಇಂಥ ಆರೋಪಗಳು ಕೇಳಿ ಬರುತ್ತಿದ್ದು, ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮೇಲೆ ಭಾರಿ ಪರಿಣಾಮ ಬೀರುತ್ತದೆ.