ಜೋಧ್‌ಪುರ್(ರಾಜಸ್ಥಾನ): ಲಕ್ಷ್ಮಿ ವಿಲಾಸ್ ಪ್ಯಾಲೇಸ್ ಹೋಟೆಲ್ ಮಾರಾಟದಲ್ಲಿನ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಕೇಂದ್ರ ಮಾಜಿ ಸಚಿವ ಅರುಣ್ ಶೌರಿಗೆ ಸಂಕಷ್ಟ ಎದುರಾಗಿದೆ.
ಪ್ರಕರಣ ಸಂಬಂಧ ಅರುಣ್ ಶೌರಿ ಸೇರಿದಂತೆ ಐವರ ವಿರುದ್ಧ ಜೋಧ್‌ಪುರ್‌ನ ವಿಶೇಷ ಸಿಬಿಐ ನ್ಯಾಯಾಲಯ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ.
ಸರ್ಕಾರದ ಅಧೀನದಲ್ಲಿ ನಡೆಯುತ್ತಿದ್ದ ಈ ಹೋಟೆಲ್ ಅನ್ನು 2002ರಲ್ಲಿ 7.5 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಆದರೆ ಇದರ ಮೌಲ್ಯ 252 ಕೋಟಿ ರೂಪಾಯಿಗಳ ಮೌಲ್ಯ ಎನ್ನಲಾಗಿತ್ತು. ಕೂಡಲೇ ಹೋಟೆಲ್ ಅನ್ನು ವಶಕ್ಕೆ ಪಡೆಯಬೇಕು ಎಂದು ಕೋರ್ಟ್ ಉದಯ್‌ಪುರ್ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿತ್ತು.
ಪ್ರಕರಣ ಸಂಬಂಧ 2014ರಲ್ಲಿ ಎಫ್‌ಐಆರ್ ದಾಖಲಾಗಿತ್ತು. ಮಾಜಿ ಹೂಡಿಕೆ ಕಾರ್ಯದರ್ಶಿ ಪ್ರದೀಪ್ ಬೈಜಾಲ್, ಸಚಿವರಾಗಿದ್ದ ಅರುಣ್ ಶೌರಿ ಮತ್ತು ಇತರ ಮೂವರು ಹೋಟೆಲ್ ಹಾಗೂ ಸೈಟ್ ಮೇಲೆ ಸರ್ಕಾರದಿಂದ ಹೂಡಿಕೆ ಮಾಡಿದ್ದರು. 7.52 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿತ್ತು. ಹೋಟೆಲ್‌ನ ಆರಂಭಿಕ ಮೌಲ್ಯವೇ 252 ಕೋಟಿ ರೂಪಾಯಿಗಳಷ್ಟಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರಕ್ಕೆ ಸುಮಾರು 244 ಕೋಟಿ ರೂಪಾಯಿ ನಷ್ಟ ಮಾಡಲಾಗಿದೆ. ಆದರೆ ಆರೋಪಿಗಳ ವಿರುದ್ಧ ಅಗತ್ಯವಾದ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ವಿಶೇಷ ಕೋರ್ಟ್‌ಗೆ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಕ್ರಿಮಿನಲ್ ಕೇಸ್‌ಗೆ ಆದೇಶಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸೆಕ್ಷನ್ 120b, ಐಪಿಸಿ ಸೆಕ್ಷನ್ 420, 13(1)ರಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದೆ.