ಮೊರೆನಾ: ಬಿಹಾರ ಮೂಲದ ಅಪ್ರಾಪ್ತೆಯನ್ನು ಖರೀದಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆಯ ವೈದ್ಯಕೀಯ ವರದಿಯ ಆಧಾರದ ಮೇಲೆ, ಅವಳು ಅಪ್ರಾಪ್ತ ವಯಸ್ಸಿನವಳು ಎಂದು ತಿಳಿದುಬಂದಿದೆ. ಅಪ್ರಾಪ್ತೆಯನ್ನು ಖರೀದಿಸಿದ್ದ ಭೋಲಾ ಜೈನ್, ಆತನ ತಾಯಿ ಮತ್ತು ಮಾರಾಟ ಮಾಡಿದ ಅಪ್ರಾಪ್ತೆಯ ಚಿಕ್ಕಮ್ಮ ಇಂದೂ ಪ್ರಜಾಪತಿ ಅವರು ಪರಾರಿಯಾಗಿದ್ದು, ಹುಡುಕಾಟ ನಡೆಯುತ್ತಿದೆ.
ಇನ್ನು ಮಾಹಿತಿಯ ಪ್ರಕಾರ, ಅಪ್ರಾಪ್ತೆಯನ್ನು ಆರೋಪಿ ಭೋಲಾ ಜೈನ್, ಚಿಕ್ಕಮ್ಮ ಇಂದೂ ಪ್ರಜಾಪತಿಯಿಂದ ಒಂದು ಲಕ್ಷ ರೂ.ಗೆ ಖರೀದಿಸಿ ಮದುವೆಯಾಗಿದ್ದಾನೆ. ಈ ಮಾಹಿತಿಯು ಮಕ್ಕಳ ಸಹಾಯವಾಣಿಗೆ ತಲುಪಿದ್ದು, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯದಿಂದ ದಾಳಿ ನಡೆಸಿ ಸಂತ್ರಸ್ತೆಯನ್ನು ಆರೋಪಿಗಳ ಹಿಡಿತದಿಂದ ಮುಕ್ತಗೊಳಿಸಿದ್ದಾರೆ. ಇನ್ನು ಅಂಬಾ ಪೊಲೀಸರು ದೂರು ದಾಖಲಿಸಿದ್ದು, ಬಳಿಕ ಸಂತ್ರಸ್ತೆಯನ್ನು ಒನ್ ಸ್ಟಾಪ್ ಕೇಂದ್ರದಲ್ಲಿ ಇರಿಸಲಾಗಿದೆ.
ಇನ್ನು ಘಟನೆಯ ಬಗ್ಗೆ ಬಾಲಕಿ ಹೇಳಿಕೆ ನೀಡಿದ್ದು, "15 ದಿನಗಳ ಹಿಂದೆ ಚಿಕ್ಕಮ್ಮ ಇಂದೂ ಪ್ರಜಾಪತಿ ಭೋಲಾ ಜೈನ್ನನ್ನು ಮನೆಗೆ ಕರೆತಂದಿದ್ದಾಳೆ. ಆಗ ಇಂದೂ ಪ್ರಜಾಪತಿ ಮತ್ತು ಭೋಲಾ ಜೈನ್ ಇಟ್ಟಿಗೆ ಗೂಡು ಕೆಲಸ ಮಾಡುತ್ತಿದ್ದ ನನ್ನ ತಂದೆಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. ಬಳಿಕ ಅದೇ ಮನೆಯಲ್ಲಿ ಭೋಲಾ ಜೈನ್ ನನ್ನನ್ನು ವಿವಾಹವಾಗಿದ್ದಾನೆ. ಅಲ್ಲಿಂದ ಅಂಬಾಗೆ ನನ್ನನ್ನು ಕರೆ ತಂದು ಸುಮಾರು 12 ದಿನಗಳವರೆಗೆ ದೈಹಿಕವಾಗಿ ಹಿಂಸಿಸಿದ್ದಾನೆ. ಅತ್ತೆ ಮತ್ತು ಚಿಕ್ಕಮ್ಮನಿಗೆ ಈ ಬಗ್ಗೆ ತಿಳಿಸಿದಾಗ, ವಿಷಯ ಬಹಿರಂಗ ಪಡಿಸದಂತೆ ಬೆದರಿಕೆ ಹಾಕಿದ್ದಾರೆ." ಎಂದು ಹೇಳಿದ್ದಾಳೆ.
ಸದ್ಯ ಅಂಬಾ ಪೊಲೀಸ್ ಠಾಣೆಯಲ್ಲಿ ಈ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.