ಅಲಿಘಡ್(ಉತ್ತರ ಪ್ರದೇಶ): ಅನಾರೋಗ್ಯದಿಂದ ಅಸುನೀಗಿದ ಹಸುವಿನ ಸಮಾಧಿ ಕಾರ್ಯಕ್ಕೆ ಮೆರವಣಿಗೆ ಹೊರಟಿದ್ದ ಇಲ್ಲಿನ ಸುಮಾರು 150 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಈ ಹಸು ಅನಾರೋಗ್ಯದಿಂದ ಬಳಲುತ್ತಿದ್ದು, ನಂತರ ದಿನೇಶ್ ಚಂದ್ರ ಅವರ ಒಡೆತನದ ಅಂಗಡಿಯ ಬಳಿ ಶವವಾಗಿ ಪತ್ತೆಯಾಗಿತ್ತು. ಹೀಗಾಗಿ ಇದನ್ನು ಗಮನಿಸಿದ ಗ್ರಾಮಸ್ಥರು ಹಸುವಿನ ಅಂತಿಮ ವಿಧಿಗಳನ್ನು ನಡೆಸಲು ನಿರ್ಧರಿಸಿದರು. ಆದರೆ ಈ ಸಂದರ್ಭದಲ್ಲಿ ಲಾಕ್‌ಡೌನ್ ನಿಯಮಗಳನ್ನು ಧಿಕ್ಕರಿಸಿ ಸುಮಾರು 100 ಮಹಿಳೆಯರು ಸೇರಿದಂತೆ 150 ಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಸೇರಿದ್ದರು.
ಈ ಘಟನೆಯ ಬಗ್ಗೆ ಉಸ್ತುವಾರಿ ಪೊಲೀಸ್ ಅಧಿಕಾರಿ ಅಭಯ್ ಕುಮಾರ್ ಶರ್ಮಾ ಅವರು ದರೋಗಾ ಧರ್ಮೇಂದ್ರ ಅವರಿಗೆ ತಕ್ಷಣ ಮಾಹಿತಿ ನೀಡಿದ್ದರಿಂದ ಅವರು ಸ್ಥಳಕ್ಕೆ ತಲುಪಿದರು. ಇವರ ಆಗಮನದ ನಂತರ ಅಲ್ಲಿ ನೆರೆದಿದ್ದ ಜನಸಮೂಹ ಚದುರಿಹೋಯಿತು.
ನಂತರ ಗುರುತಿಸಲ್ಪಟ್ಟ 25 ಜನ ಹಾಗೂ 125 ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಜವಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಪೊಲೀಸರು ಹಸುವಿನ ಮೃತದೇಹವನ್ನು ಸಮಾಧಿ ಮಾಡಿದರು.