ಕೋಟಾ/ರಾಜಸ್ಥಾನ: ಕೋಟಾದ ಸರೋಲಾ ಮಾರ್ಗದಲ್ಲಿ ಎಮ್ಮೆಗಳು ಸೇರಿದಂತೆ ಸುಮಾರು 25ಕ್ಕೂ ಅಧಿಕ ಜಾನುವಾರುಗಳ ಕಳೇಬರ ಪತ್ತೆಯಾಗಿದೆ.
ಮೂಲಗಳ ಪ್ರಕಾರ, ಸುಲ್ತಾನಪುರ ಗ್ರಾಮದ ಕೆಲವು ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಯಲ್ಲಿ ಎರಡು ಡಜನ್ಗೂ ಹೆಚ್ಚು ಜಾನುವಾರುಗಳ ಕಳೇಬರ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಕೆಲ ಹಿಂದೂ ಸಂಘಟನೆಗಳಾದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಗೋವು ಪವಿತ್ರ ಪ್ರಾಣಿ. ಈ 'ಪವಿತ್ರ ಪ್ರಾಣಿಗಳ' ಸಾಮೂಹಿಕ ಹತ್ಯೆಗೆ ಕಾರಣವಾದ ವ್ಯಕ್ತಿಯನ್ನು ಬಂಧಿಸುವಂತೆ ಅವರು ಸ್ಥಳೀಯ ಆಡಳಿತಕ್ಕೆ ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 24 ಗಂಟೆಗಳ ಒಳಗೆ ಅಪರಾಧಿಗಳನ್ನು ಬಂಧಿಸದಿದ್ದರೆ ಬಜರಂಗದಳದ ಜೊತೆಗೆ ವಿಹೆಚ್‌ಪಿ( ವಿಶ್ವ ಹಿಂದೂ ಪರಿಷತ್) ಘಟನೆಗೆ ಕಾರಣರಾದವರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿದೆ ಎಂದು ವಿಹೆಚ್‌ಪಿ ಜಿಲ್ಲಾ ಉಸ್ತುವಾರಿ ಇಂದಾರಿ ಮೀನಾ ಎಚ್ಚರಿಕೆ ನೀಡಿದ್ದಾರೆ.
ಜಾನುವಾರುಗಳ ಹತ್ಯೆ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ತಹಶೀಲ್ದಾರ್ ಅಮೋದ್ ಮಾಥುರ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲ್ತಾನಪುರ ಎಸ್‌ಹೆಚ್‌ಒಗೆ ಮಾಹಿತಿ ನೀಡಿದ್ದೇವೆ. ಗೋವುಗಳ ಸಾಮೂಹಿಕ ಹತ್ಯೆಗೆ ಕಾರಣರಾದವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.