ಕೋಲ್ಕತ್ತಾ: ಪಾರ್ಸಿ ಸಮುದಾಯದ ಮಹಿಳೆವೋರ್ವಳು ತನ್ನ ಮಕ್ಕಳಿಗೆ ಅಗ್ನಿ ದೇವಾಲಯಗಳಿಗೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಯೂಟ್ಯೂಬ್ನಲ್ಲಿ ನೇರಪ್ರಸಾರಕ್ಕೆ ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ.
ಅರ್ಜಿದಾರ ಮಹಿಳೆ ಬೇರೆ ಸಮುದಾಯದಲ್ಲಿ ವಿವಾಹವಾಗಿದ್ದ ಕಾರಣದಿಂದ ಆಕೆಯ ಮಕ್ಕಳಿಗೆ ಅಗ್ನಿ ದೇವಾಲಯಗಳಿಗೆ ಪ್ರವೇಶಕ್ಕೆ ನಿರಾಕರಿಸಲಾಗಿತ್ತು ಎಂಬ ಆರೋಪ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಈ ಮಹಿಳೆಯ ಜೊತೆಗೆ ಅವರ ತಾಯಿ ಕೂಡಾ ಸಹ ಅರ್ಜಿದಾರರಾಗಿದ್ದು, ಕಾನೂನು ಹೋರಾಟ ಆರಂಭಿಸಿದ್ದಾರೆ. ಇದೇ ಅರ್ಜಿ ವಿಚಾರಣೆಯನ್ನು ಯೂಟ್ಯೂಬ್ ಲೈವ್ನಲ್ಲಿ ಪ್ರಸಾರ ಮಾಡಲಾಗುತ್ತದೆ.
ದೇವಾಲಯಗಳಿಗೆ ಪ್ರವೇಶ ನಿರಾಕರಣೆಯ ಕಾರಣ ದಿವಂಗತ ಎರ್ವಾಡ್ ಧುಂಜೀಭಾಯ್ ಬೈರಂಜಿ ಮೆಹ್ತಾ ಅವರ ಜೋರಾಸ್ಟ್ರಿಯನ್ ಅಂಜುಮಾನ್ ಅತಾಶ್ ಅದರಾಮ್ ಟ್ರಸ್ಟ್ ಹಾಗೂ ಕೋಲ್ಕತ್ತಾದ ಪಾರ್ಸಿ ಜೊರಾಸ್ಟ್ರಿಯನ್ ಅಸೋಸಿಯೇಷನ್ ವಿರುದ್ಧ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ಪ್ರತಿವಾದಿವಾಗಿದ್ದ ಪಾರ್ಸಿ ಜೊರಾಸ್ಟ್ರಿಯನ್ ಅಸೋಸಿಯೇಷನ್ ನ್ಯಾಯಾಲಯದ ವಿಚಾರಣೆಯ ನೇರಪ್ರಸಾರಕ್ಕೆ ಮನವಿ ಮಾಡಿಕೊಂಡಿತ್ತು. ನ್ಯಾಯಮೂರ್ತಿ ಸೌಮೆನ್ಸೇನ್ ಅವರ ಏಕಸದಸ್ಯ ಪೀಠ ಅವರ ಮನವಿಯನ್ನು ತಿರಸ್ಕರಿಸಿತ್ತು.
ಆದರೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದ ಅವರು ವಿಚಾರಣೆಯ ನೇರಪ್ರಸಾರಕ್ಕೆ ಒತ್ತಾಯಿಸಿದರು. ಪಾರ್ಸಿ ಜೊರಾಸ್ಟ್ರಿಯನ್ ಅಸೋಸಿಯೇಷನ್ ಪರವಾಗಿ ವಕೀಲ ಫಿರೋಜ್ ಎಡುಲ್ಜಿ ವಾದ ಮಂಡಿಸಿದ್ದರು. ''ರಾಷ್ಟ್ರಮಟ್ಟದಲ್ಲಿ ಈ ಪ್ರಕರಣ ಸದ್ದು ಮಾಡುತ್ತಿದ್ದು, ನೇರಪ್ರಸಾರಕ್ಕೆ ಅವಕಾಶ ಕೊಡಬೇಕು. ನೇರಪ್ರಸಾರಕ್ಕೆ ತಗಲುವ ವೆಚ್ಚವನ್ನು ಪಾರ್ಸಿ ಜೊರಾಸ್ಟ್ರಿಯನ್ ಅಸೋಸಿಯೇಷನ್ ಭರಿಸುತ್ತದೆ'' ಎಂದು ಈ ಅರ್ಜಿಯ ವಿಚಾರಣೆ ವೇಳೆ ಮನವಿ ಮಾಡಿದ್ದರು.
ಕಲ್ಕತ್ತಾ ಹೈಕೋರ್ಟ್ ಯೂಟ್ಯೂಬ್ನಲ್ಲಿ ವಿಚಾರಣೆಯ ನೇರಪ್ರಸಾರಕ್ಕೆ ಅನುಮತಿ ನೀಡಿದ್ದು, ನ್ಯಾಯಾಲಯದಲ್ಲಿ ಎರಡು ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಈ ಮೂಲಕ ದೇಶದಲ್ಲೇ ಪ್ರಥಮ ಬಾರಿಗೆ ವಿನೂತನ ರೀತಿಯಲ್ಲಿ ನ್ಯಾಯಾಲಯದ ವಿಚಾರಣೆ ಜನರ ಬಳಿಗೆ ತಲುಪಲಿದೆ.