ದೆಹಲಿ: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಕುಳಿತಿದ್ದವರಿಗೆ ಏರ್‌ಲೈನ್ಸ್ ಸಂಸ್ಥೆಗಳಲ್ಲಿ ಉದ್ಯೋಗದ ಆಮಿಷ ಒಡ್ಡಿ ವಂಚಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ನಕಲಿ ಉದ್ಯೋಗ ದಂಧೆ ನಡೆಸುತ್ತಿದ್ದ ಮೂವರ ಹೆಡೆಮುರಿ ಕಟ್ಟಿದ್ದಾರೆ.
ಲಾಕ್ಡೌನ್ ದಿನಗಳಲ್ಲಿ ಕೆಲಸವಿಲ್ಲದೆ ಕಂಗೆಟ್ಟಿದ್ದ ಜನರಿಗೆ, ಕೇಂದ್ರ ಸರ್ಕಾರದ ಉದ್ಯೋಗಗಳನ್ನು ಕೊಡಿಸುವುದಾಗಿ ಹೇಳಿ, ಹಣ ವಸೂಲಿ ಮಾಡಿದ್ದರು. ಜನರ ನಂಬಿಕೆ ಗಳಿಸಲು ನಕಲಿ ಉದ್ಯೋಗ ಪ್ರಮಾಣ ಪತ್ರಗಳನ್ನ ಸೃಷ್ಟಿಸಿ ಸಂದರ್ಶನಗಳನ್ನೂ ಮಾಡಿದ್ದರು.
ಕೆಲ ದಿನಗಳ ನಂತರ ಇದೊಂದು ವ್ಯವಸ್ಥಿತ ಸಂಚಿನ ಜಾಲ ಎಂದು ತಿಳಿದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಕೆ ಅದಾಗಲೇ 71 ಸಾವಿರ ರೂಪಾಯಿ ಕಳೆದುಕೊಂಡಿದ್ದರಂತೆ. 2017 ರಿಂದ ಜೊಮ್ಯಾಟೋದಲ್ಲಿ ಕೆಲಸ ಮಾಡ್ತಿದ್ದ ಈಕೆ, ಕೊರೊನಾದಿಂದಾಗಿ ಕೆಲಸ ಕಳೆದುಕೊಂಡಿದ್ದರು. ಮತ್ತೊಂದು ಕೆಲಸಕ್ಕಾಗಿ ಹುಡುಕಾಡುತ್ತಿದ್ದಾಗ, ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗ ನೇಮಕಾತಿಗೆ ಸಂಬಂಧಿಸಿದಂತೆ ಇಮೇಲ್ ಬಂದಿತ್ತು. ತನ್ನ ರೆಸ್ಯೂಮ್ ಅನ್ನು ಇಮೇಲ್ ಮಾಡಿದ ಮಹಿಳೆ, ಮೊದಲಿಗೆ 1,875 ರೂಪಾಯಿ ಹಣವನ್ನೂ ಕಳಿಸಿಕೊಟ್ಟಿದ್ದಾಳೆ. ಕೆಲ ದಿನಗಳ ಬಳಿಕ ಆಫರ್ ಲೆಟರ್ ಕೂಡ ಬಂದಿದ್ದು, ಯೂನಿಫಾರಂ ಸೇರಿ ಇತರೆ ವೆಚ್ಚಗಳಿಗಾಗಿ ಹಣ ಕೇಳಿದ್ದು, ತಾನು ನೀಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮಹಿಳೆಯ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಉತ್ತರಪ್ರದೇಶದ ನೊಯ್ಡಾದಲ್ಲಿ ಕಾಲ್ ಸೆಂಟರ್ ನಡೆಸುತ್ತಿದ್ದ ಮಲಿಕ್, ಆತನ ಸಹಚರ ಕುಮುದ್ ರಂಜನ್ ಕಮಲೇಶ್ ಮತ್ತು ಪ್ರಿಯಾಂಕಾ ಗೋಸ್ವಾಮಿಯನ್ನು ಬಂಧಿಸಿದ್ದಾರೆ.
ಮಲಿಕ್ ಮತ್ತು ಗ್ಯಾಂಗ್ ಜಾಬ್ ಆ್ಯಡ್ ಪೋರ್ಟಲ್ www.shine.com ನಲ್ಲಿ ನಕಲಿ ಉದ್ಯೋಗ ಖಾತೆಯನ್ನ ಸೃಷ್ಟಿಸಿದ್ದರು. ಆ ಮೂಲಕ ಉದ್ಯೋಗಾಕಾಂಕ್ಷಿಗಳ ಮಾಹಿತಿ ಸಂಗ್ರಹಿಸಿ, ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಈ ತಂಡ ಸುಮಾರು 5 ತಿಂಗಳಿಂದ ಸಕ್ರಿಯವಾಗಿದ್ದು, ಈವರೆಗೆ 60 ಲಕ್ಷ ರೂಪಾಯಿಗೂ ಅಧಿಕ ಹಣ ಗಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.