ಅಲಿಗಢ (ಉತ್ತರಪ್ರದೇಶ): ಪ್ರೇಯಸಿಗಾಗಿ ಎಂಬಿಎ ಪ್ರವೇಶ ಪ್ರಶ್ನೆಪತ್ರಿಕೆ ಲೀಕ್ ಮಾಡಿದ ಬಹುಜನ ಸಮಾಜವಾದಿ ಪಕ್ಷದ ನಾಯಕನೊಬ್ಬ ಇದೀಗ ಕಂಬಿ ಎಣಿಸುತ್ತಿದ್ದಾನೆ.
ಬಿಎಸ್ಪಿ ನಾಯಕ ಫಿರೋಜ್ ಆಲಂ ಅಕಾ ರಾಜಾ ಎಂಬಾತ ಅಲಿಗಢ ಮುಸ್ಲಿಂ ವಿವಿಯ ಎಂಬಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ಕಳ್ಳ ಕೃತ್ಯಕ್ಕೆ ವಿವಿಯ ನೌಕರ ಇರ್ಷಾದ್ ಎಂಬಾತನ ನೆರವು ಪಡೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಇನ್ನು ಯಾತಕ್ಕಾಗಿ ಪ್ರಶ್ನೆಪತ್ರಿಕೆ ಲೀಕ್ ಮಾಡಿದೆ ಅಂದ್ರೆ, ತನ್ನ ಪ್ರಿಯತಮೆ ಕಡೆ ಬೊಟ್ಟು ಮಾಡಿದ್ದಾನೆ. ಎಂಬಿಎ ಪರೀಕ್ಷೆ ಬರೆಯಲಿದ್ದ ತನ್ನ ಪ್ರೇಯಸಿಗಾಗಿ ಈ ಕೆಲಸ ಮಾಡಿದೆ ಎಂದು ಹೇಳಿಕೊಂಡಿದ್ದಾನೆ.
ಇದಕ್ಕೂ ಮೊದಲು ಗೆಳೆಯರ ಮಾತು ಕೇಳಿ, ನಕಲಿ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿದ್ದಾನೆ. ಇದು ಗೊತ್ತಾದ ನಂತರ ಪ್ರೇಯಸಿ, ಫಿರೋಜ್ನೊಂದಿಗೆ ಮಾತಾಡುತ್ತಿರಲಿಲ್ಲವಂತೆ. ಪ್ರೇಯಸಿಯನ್ನು ಹೇಗಾದರೂ ಸಂತೋಷಪಡಿಸಬೇಕೆಂದು, ಹೈದರ್ ಎಂಬುವವನ ಸಹಾಯದಿಂದ ವಿವಿ ನೌಕರ ಇರ್ಷಾದ್ನನ್ನು ಪರಿಚಯ ಮಾಡಿಕೊಂಡಿದ್ದಾನೆ. ಇರ್ಷಾದ್ನಿಗೆ ಖಾಯಂ ನೌಕರಿ ಕೊಡಿಸುವ ಆಮಿಷವೊಡ್ಡಿ, ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ, ಈ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸಿ, ಪ್ರತಿಯೊಂದಕ್ಕೂ 2000 ರೂ ಹಣ ಪಡೆದು ಮಾರಾಟ ಮಾಡಿದ್ದಾನೆ. ಇದಕ್ಕಾಗಿ ವಾಟ್ಸ್ಆ್ಯಪ್ ಗ್ರೂಪ್ ಬೇರೆ ಮಾಡಿದ್ದನಂತೆ.
ಈತನ ಗ್ರಹಚಾರ ಕೆಟ್ಟಿದ್ದು ಎಂದು ಕಾಣುತ್ತೆ, ಇದೀಗ ಜೈಲುಪಾಲಾಗಿದ್ದಾನೆ. ಈತನಿಗೆ ಸಹಾಯ ಮಾಡಿದ ಹೈದರ್ ಹಾಗೂ ಇರ್ಷಾದ್ ಸಹ ಜೈಲುಕೋಣೆ ಸೇರಿದ್ದಾರೆ. ಇದೆಲ್ಲದಕ್ಕೂ ಕಾರಣಳಾದ ಫಿರೋಜ್ನ ಪ್ರೇಯಸಿ ಮಾತ್ರ ನಾಪತ್ತೆಯಾಗಿದ್ದಾಳೆ.
ಎಸ್ಎಸ್ಪಿ ಆಕಾಶ್ ತಿಳಿಸಿದಂತೆ, ಹೈದರ್ನ ಸಂಬಂಧ ತಹ್ಸೀಮ್ ಸಿದ್ದಿಕಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ರ ನಿಕಟವರ್ತಿಯಾಗಿದ್ದಾರೆ.