ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೈಗಾರಿಕಾ ನಿಯೋಗಗಳು, ಖಾಸಗಿ ಹೂಡಿಕೆದಾರರು ಮತ್ತು ಉದ್ಯಮದ ನಾಯಕರು ಭೇಟಿ ಮಾಡಿ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಸಂಬಂಧ ವ್ಯಾಪಕ ಚರ್ಚೆ, ಮಾತುಕತೆ ನಡೆಸಿದ್ದರು.
ಡಸಾಲ್ಟ್, ಲಾಕ್ಹೀಡ್ ಮಾರ್ಟಿನ್, ಡೆನ್ಸು, ಆರ್ಸೆಲರ್ ಮಿತ್ತಲ್, ನೊವೊ ನಾರ್ಡಿಸ್ಕ್, ಲೂಲು ಗ್ರೂಪ್, ಡಮಾಕ್ ಗ್ರೂಪ್, ಎನ್‌ಇಸಿ ಕಾರ್ಪೊರೇಷನ್, ಕ್ರೆಸೆಂಟ್ ಪೆಟ್ರೋಲಿಯಂ ಮತ್ತು ನೆಸ್ಲೆ ಮುಂತಾದ ಪ್ರಮುಖ ಉದ್ಯಮದ ಮುಖಂಡರೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಕರ್ನಾಟಕದ ಜಾಗತಿಕ ಆರ್ಥಿಕ ದೃಷ್ಟಿಕೋನ ಮತ್ತು ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮಾಹಿತಿ ಹಂಚಿಕೊಂಡರು. ರಾಜ್ಯದಲ್ಲಿನ ವ್ಯಾಪಾರ ವಾತಾವರಣ ಮತ್ತು ಹೂಡಿಕೆಯ ವಾತಾವರಣವನ್ನು ಸುಧಾರಿಸಲು ತಮ್ಮ ಸರ್ಕಾರವು ಕೈಗೊಂಡ ಪ್ರಯತ್ನಗಳ ಬಗ್ಗೆಯೂ ವಿವರಣೆ ನೀಡಿದರು.
ಡಸಾಲ್ಟ್ ಸಿಸ್ಟಮ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಫ್ಲಾರೆನ್ಸ್ ವರ್ಜೆಲೆನ್, ತಮ್ಮ ಕಂಪನಿಯು ರಾಜ್ಯದಲ್ಲಿ ಸ್ಮಾರ್ಟ್ ಮ್ಯಾನುಫ್ಲಾಕ್ಚುರಿಂಗ್ ಹಾಗೂ ಸ್ಮಾರ್ಟ್ ಸಿಟಿಗಳ 'ಸೆಂಟರ್ಸ್ ಫಾರ್ ಎಕ್ಸಲೆನ್ಸ್' ತೆರೆಯುವ ಯೋಜನೆ ಹಾಕಿಕೊಂಡಿದೆ. ಈ ಎರಡು ಎಕ್ಸಲೆನ್ಸ್ ಕೇಂದ್ರಗಳ ಮೂಲಕ ಯುವಕರಿಗೆ ಉದ್ಯೋಗ ಒದಗಿಸಲು ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಿದೆ ಎಂದು ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾಹಿತಿ ಹಂಚಿಕೊಂಡರು.
ಲಾಕ್‌ಹೀಡ್ ಮಾರ್ಟಿನ್ ಗ್ರೂಪ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಿಚರ್ಡ್ ಆಂಬ್ರೋಸ್ ಕರ್ನಾಟಕ ಪೆವಿಲಿಯನ್ನಲ್ಲಿ ಕರ್ನಾಟಕದಲ್ಲಿ ಏರೋಸ್ಪೇಸ್‌ಗಾಗಿ ಇರುವ ಅವಕಾಶ ಹಾಗೂ ವಾತಾವರಣದ ಬಗ್ಗೆ ಸಿಎಂ ಬಿಎಸ್ವೈರಿಂದ ಮಾಹಿತಿ ಪಡೆದರು. ಜೊತೆಗೆ ಶೀಘ್ರವೇ ಬೆಂಗಳೂರಿಗೆ ಭೇಟಿ ನೀಡುವ ಭರವಸೆ ನೀಡಿದರು.
ಗ್ಲೋಬಲ್ ಆಟೋಮೋಟಿವ್ ಕಾಂಪೋನೆಂಟ್ಸ್ ಮ್ಯಾನಿಫ್ಯಾಕ್ಚರ್ ಆದ ಡೆನ್ಸೋ ಕಂಪನಿ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಂವಹನ ನಡೆಸಿತು. ಆರ್ಸೆಲರ್ ಮಿತ್ತಲ್ ಅಧ್ಯಕ್ಷರಾದ ಲಕ್ಷ್ಮಿ ಎನ್ ಮಿತ್ತಲ್ ಅವರು ಕರ್ನಾಟಕದಲ್ಲಿ ತಮ್ಮ ಕಂಪನಿಯ ಹೂಡಿಕೆ ಯೋಜನೆಗಳ ಬಗ್ಗೆ ಚರ್ಚಿಸಿದರು.
ನೊವೊ ನಾರ್ಡಿಸ್ಕ್‌ನ ಅಧ್ಯಕ್ಷ ಮತ್ತು ಸಿಇಒ ಲಾರ್ಸ್ ಫ್ರೂಗಾರ್ಡ್ ಜೋರ್ಗೆನ್ಸನ್ ಅವರು ಕರ್ನಾಟಕ ಸರಕಾರದೊಂದಿಗೆ ಜೊತೆಗೂಡಿ ಡಯಾಬಿಟಿಸ್ ರೋಗದ ಬಗ್ಗೆ ರಾಜ್ಯದೆಲ್ಲೆಡೆ ಜಾಗೃತಿ ಮೂಡಿಸುವ ಪ್ರಸ್ತಾವವಿಟ್ಟರು. ಲೂಲು ಸಮೂಹದ ಅಧ್ಯಕ್ಷ ಯೂಸುಫ್ ಅಲಿ ಅವರು ಲಾಜಿಸ್ಟಿಕ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆ ಪ್ರಸ್ತಾಪದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದರು.
ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಉತ್ತಮ ವಾತಾವರಣವಿದೆ. ಹೂಡಿಕೆ ವಿಚಾರವಾಗಿ ಇಲ್ಲಿ ಯಾವುದೇ ರೀತಿಯ ತೊಂದರೆ, ಸಮಸ್ಯೆ, ಅಡೆತಡೆ ಇದ್ದರೂ ಪರಿಹರಿಸಲು ಸಿದ್ಧವಿದ್ದೇವೆ. ಅಧಿಕಾರಿಗಳು ಸಹ ಹೆಚ್ವು ಶ್ರದ್ಧೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಶ್ರೀ ಜಗದೀಶ್ ಶೆಟ್ಟರ್, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಗೌರವಾನ್ವಿತ ಪ್ರಧಾನಿ ಮತ್ತು ದುಬೈ ಎಮಿರೇಟ್ ನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನು ಭೇಟಿಯಾದರು. ಉಭಯ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ವ್ಯಾಪಾರದ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ವರ್ಧಿತ ಸಹಕಾರಕ್ಕಾಗಿ ಸಂಭಾವ್ಯ ಕ್ಷೇತ್ರಗಳ ಬಗ್ಗೆ ಚರ್ಚಿಸಿದ್ದೇವೆ ಎಂದರು.
ಇನ್‌ವೆಸ್ಟ್ ಕರ್ನಾಟಕ ಕರ್ಟನ್ ರೈಸರ್:
ಮುಖ್ಯಮಂತ್ರಿಗಳು ಜಾಗತಿಕ ಹೂಡಿಕೆದಾರರ ಶೃಂಗಸಭೆ 2020 ಕರ್ಟನ್ ರೈಸರ್ ಅನ್ನು ನೆರವೇರಿಸಲಿದ್ದು, ಈ ಶೃಂಗಸಭೆಯು ನವೆಂಬರ್ 3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೋದ್ಯಮಿಗಳು, ವ್ಯಾಪಾರ ಮುಖಂಡರು, ಉದ್ಯಮಿಗಳು ಮತ್ತು ಕಂಪನಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ, ಈ ವೇಳೆ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಪ್ರದರ್ಶಿಸಲಾಗುವುದು. ಈ ವೇಳೆ ಮಾತನಾಡಲಿರುವ ಮುಖ್ಯಮಂತ್ರಿ ಯಡಿಯೂರಪ್ಪ , ಜಾಗತಿಕ ವ್ಯಾಪಾರ ಮುಖಂಡರನ್ನು ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಎಂಡಿ ಶ್ರೀ ವಿಕ್ರಮ್ ಕಿರ್ಲೋಸ್ಕರ್ ಭಾಗವಹಿಸಲಿದ್ದಾರೆ.
ಔತಣಕೂಟ:
ಮಧ್ಯಪ್ರದೇಶದ ಸಿಎಂ ಕಮಲ್ನಾಥ್ ಅವರೊಂದಿಗೆ ಉಪಾಹಾರ ಕೂಟ ಜರುಗಿತು. ಈ ವೇಳೆ ಆಯಾ ರಾಜ್ಯಗಳ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಅಭಿಪ್ರಾಯಗಳನ್ನು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ವಿನಿಮಯ ಮಾಡಿಕೊಂಡರು. ಕರ್ನಾಟಕ ಸರ್ಕಾರ ಕೃಷಿ ಚಟುವಟಿಕೆಯನ್ನು ಮುಂಚೂಣಿಗೆ ತರುವಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಹಾಗೂ ಇತರೆ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿ ಕಮಲ್ ನಾಥ್ ಶ್ಲಾಘಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಶ್ರೀ ಟಿ.ಎಂ.ವಿಜಯ್ ಭಾಸ್ಕರ್, ಮುಖ್ಯ ಕಾರ್ಯದರ್ಶಿ ಡಾ.ವಿ.ವಿ.ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರ ಅಧಿಕಾರಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ರು.