ಪಾಟ್ನಾ(ಬಿಹಾರ್) : ಇಂದು ನಡೆಯುತ್ತಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಕೊನೆಯ ಹಂತದ ಮತದಾನದ ವೇಳೆ ಆರ್ಜೆಡಿ ಅಭ್ಯರ್ಥಿಯ ಸಹೋದರನೊಬ್ಬನ ಮೇಲೆ ಅಪರಿಚಿತ ಹಲ್ಲೆಕೋರರು ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ನಡೆದಿದೆ.
ಪೂರ್ಣಿಯಾ ಜಿಲ್ಲೆಯ ದಮದಾ ವಿಧಾನಸಭಾ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿ ಬಿಟ್ಟು ಸಿಂಗ್ ಅವರ ಸಹೋದರ ಬೆನಿ ಸಿಂಗ್ ಗುಂಡು ತಿಂದ ವ್ಯಕ್ತಿ ಎಂದು ತಿಳಿದು ಬಂದಿದೆ.
ಇಂದು ಮೂರನೇ ಮತ್ತು ಕೊನೆಯ ಹಂತದ ಮತದಾನದವಿತ್ತು. ಆರ್ಜೆಡಿ ಅಭ್ಯರ್ಥಿಯಾಗಿದ್ದ ಸಹೋದರ ಬಿಟ್ಟು ಸಿಂಗ್ನನ್ನು ಬೆಂಬಲಿಸುವಂತೆ ಇಂದು ಮಧ್ಯಾಹ್ನ ಬೆನಿ ಸಿಂಗ್ ಮತಗಟ್ಟೆಯಿಂದ ಮತಗಟ್ಟೆಗೆ ಓಡಾಡುತ್ತಿದ್ದನು. ಸರ್ಸಿ ಎಂಬ ಗ್ರಾಮದ ಮತದಾನ ಕೇಂದ್ರದಿಂದ ಹೊರಬರುತ್ತಿದ್ದಂತೆ ಮೂರರಿಂದ ನಾಲ್ಕು ಅಪರಿಚತ ಹಲ್ಲೆಕೋರರು ಅವನ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಬೆನಿಯ ಬೆಂಬಲಿಗರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಗುಂಡು ಹಾರಿಸಿ ಪರಾರಿಯಾದ ಕೊಲೆಗಾರರನ್ನು ಬಂಧಿಸಲು ತಂಡ ರಚಿಸಿದ್ದಾರೆ.
ದಮದಾ ವಿಧಾನಸಭಾ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿ ಬಿಟ್ಟು ಸಿಂಗ್ ಹಾಗೂ ಮೃತಪಟ್ಟ ಸಹೋದರ ಬೆನಿ ಸಿಂಗ್ ಇಬ್ಬರ ಮೇಲೂ ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೂರ್ಣಿಯಾ ಪೊಲೀಸ್ ಅಧಿಕಾರಿಗಳು ಅವರ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರೀಯ ಜನತಾದಳದ ಮುಖಂಡ ಮನೋಜ್ ಝಾ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ 'ರಕ್ಷಾ ರಾಜ್' (ರಾಕ್ಷಸರ ರಾಜ್ಯ) ಬಿಹಾರದಲ್ಲಿ ಗೋಚರಿಸುತ್ತದೆ ಎಂದು ಪ್ರಕರಣವನ್ನು ಖಂಡಿಸಿದ್ದಾರೆ.