ಮಥುರಾ(ಉತ್ತರಪ್ರದೇಶ): ಮನೆಯಲ್ಲಿ ಯಾರು ಇಲ್ಲದ ವೇಳೆ 14 ವರ್ಷದ ಹುಡುಗಿ ಹಾಗೂ 17 ವರ್ಷದ ಹುಡುಗ ಬೆಂಕಿ ಹಚ್ಚಿಕೊಂಡಿರುವ ಘಟನೆ ಉತ್ತರಪ್ರದೇಶದ ಮಥುರಾದ ಕುಂಜೇರ್ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ 14 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 17 ವರ್ಷದ ಮುಖೇಶ್ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಹುಡುಗಿ ಮನೆಯಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ.
ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ಹುಡುಗ ಮನೆಯಿಂದ ಹೊರಗಡೆ ಓಡಿ ಬಂದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಹುಡುಗಿ ಮನೆಯೊಳಗೆ ಸಾವನ್ನಪ್ಪಿದ್ದಾಳೆ. ಇವರಿಬ್ಬರು ಯಾವ ಕಾರಣಕ್ಕಾಗಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂಬುದರ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.