ನವದೆಹಲಿ: ಚೀನಾದೊಂದಿಗಿನ ಗಡಿ ವಿವಾದವನ್ನು ಶೀಘ್ರ ಬಗೆಹರಿಸದಿದ್ದಲ್ಲಿ ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಮೂಡಿದ ಅಭಿಪ್ರಾಯವನ್ನೇ ಸಿಂಗ್ ಪುನರುಚ್ಚರಿಸಿದ್ದಾರೆ.
ಭಾರತ-ಚೀನಾ ವಾಸ್ತವ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಪೂರ್ಣ ಪ್ರಮಾಣದ ಸಂಘರ್ಷದ ಸ್ಥಿತಿಯೇ ಆಗಿದೆ ಎಂಬ ಸೋನಿಯಾ ಗಾಂಧಿಯವರ ಅಭಿಪ್ರಾಯಕ್ಕೆ ಸಮ್ಮತಿಸಿರುವ ಸಿಂಗ್, ಗಡಿ ಸಂಘರ್ಷವನ್ನು ಸೂಕ್ತ ರೀತಿಯಲ್ಲಿ ಪರಿಹರಿಸದಿದ್ದರೆ ಗಂಭೀರ ಪರಿಣಾಮಗಳುಂಟಾಗಬಹುದು ಎಂದಿದ್ದಾರೆ.
ಚೀನಾ ಅತಿಕ್ರಮಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ತಪ್ಪು ಮಾಹಿತಿ ನೀಡುತ್ತಿದ್ದು, ಅವರು ಮಾತನಾಡುವಾಗ ತಮ್ಮ ಶಬ್ದಗಳ ಬಳಕೆಯ ಪರಿಣಾಮಗಳ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಸೋಮವಾರದ ಸರ್ವಪಕ್ಷಗಳ ಸಭೆಯ ನಂತರ ಮನಮೋಹನ್ ಸಿಂಗ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
"ಪ್ರಧಾನಿಯ ಮಾತುಗಳನ್ನೇ ಬಳಸಿ ಚೀನಾ ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳಲು ಅವಕಾಶ ನೀಡಕೂಡದು. ಸರ್ಕಾರದ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಗಡಿ ವಿವಾದ ಮತ್ತಷ್ಟು ಉಲ್ಬಣಿಸದಂತೆ ನೋಡಿಕೊಳ್ಳಬೇಕಿದೆ. ತಪ್ಪು ಮಾಹಿತಿ ನೀಡುವುದು ರಾಜತಾಂತ್ರಿಕತೆ ಅಥವಾ ಬಲಿಷ್ಠ ನಾಯಕತ್ವಕ್ಕೆ ಪರ್ಯಾಯವಲ್ಲ" ಎಂದು ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಜೂನ್ 15 ರಂದು ಗಾಲ್ವನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತ ಯೋಧರ ನಡುವಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸರ್ವಪಕ್ಷ ಸಭೆ ಕರೆದು ತಮ್ಮ ನಿಲುವು ಮಂಡಿಸಿದ್ದರು. ಆದರೆ, ಪ್ರಧಾನಿಯ ಹೇಳಿಕೆ ಗೊಂದಲ ಮೂಡಿಸಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಮತ್ತೊಮ್ಮೆ ಸ್ಪಷ್ಟೀಕರಣ ನೀಡಲಾಗಿತ್ತು. ಇದನ್ನೇ ಅಸ್ತ್ರವಾಗಿ ಮಾಡಿಕೊಂಡಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಟೀಕೆಯ ಸುರಿಮಳೆಯನ್ನೇ ಹರಿಸುತ್ತಿದೆ.