ಮುಂಬೈ: ಹಲವರ ಬಲಿದಾನದ ನಂತರ ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ಕಾನೂನನ್ನು ಬಾಂಬೆ ಹೈ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಶೇ.16ರಷ್ಟು ಮೀಸಲಾತಿ ಕಲ್ಪಿಸುವುದು ಸಮಂಜಸವಲ್ಲ ಎಂದೂ ಹೇಳಿದೆ.
ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಮರಾಠ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿ ಕಲ್ಪಿಸುವ ಮಹಾರಾಷ್ಟ್ರ ಸರ್ಕಾರದ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಹಾಗೂ ಭಾರತಿ ಡಾಂಗ್ರೆ ಅವರು ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದರು.
ಮರಾಠ ಸಮುದಾಯಕ್ಕೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರತ್ಯೇಕ ಸ್ಥಾನಮಾನ ಕಲ್ಪಿಸುವ ಸರ್ಕಾರದ ನಿರ್ಧಾರವನ್ನು ನಾವು ಎತ್ತಿಹಿಡಿದಿದ್ದೇವೆ ಎಂದು ನ್ಯಾಯಮೂರ್ತಿಗಳು ಆದೇಶ ಹೊರಡಿಸಿದರು. ಆದರೆ, ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ ಶೇ. 16ರಷ್ಟು ಮೀಸಲಾತಿ ನೀಡುವ ಬದಲು, ಶೇ. 12-13ರಷ್ಟು ನೀಡಲು ಸೂಚಿಸಿದರು.
ಕಳೆದ ವರ್ಷ ನವೆಂಬರ್ 30ರಂದು ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ಶೇ .16ರಷ್ಟು ಮೀಸಲಾತಿ ನೀಡುವ ಕಾನೂನನ್ನು ಜಾರಿ ಮಾಡಿತ್ತು. ಇದರಿಂದ ಶೇ. 52ರಷ್ಟಿದ್ದ ಒಟ್ಟಾರೆ ಮೀಸಲು ಪ್ರಮಾಣ ಏರಿಕೆಯಾಗಿ, ಶೇ. 68ರಷ್ಟಾಗಿದೆ. ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.