ಮುಂಬೈ(ಮಹಾರಾಷ್ಟ್ರ): ಲಾಕ್ಡೌನ್ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಮೊದಲ ಬಾರಿಗೆ ತನ್ನ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿ ಸಾರ್ವಜನಿಕರಿಗಾಗಿ ನೇರಪ್ರಸಾರ ಮಾಡಿದೆ.
ನ್ಯಾಯಮೂರ್ತಿ ಗೌತಮ್ ಪಟೇಲ್ 9 ಪ್ರಕರಣಗಳ ವಿಚಾರಣೆಯನ್ನು ನಡೆಸಿದ್ದು, ವಕೀಲರು, ದೂರುದಾರರು, ಸರ್ಕಾರಿ ಅಧಿಕಾರಿಗಳು, ಸೇರಿದಂತೆ 450 ಮಂದಿ ಈ ವಿಚಾರಣೆಗಳಲ್ಲಿ ಭಾಗಿಯಾಗಿದ್ದರು.
ಕೊರೊನಾ ಕಾರಣಕ್ಕೆ ಕೋರ್ಟ್ ಸಿಬ್ಬಂದಿ ಕಡಿತವಾಗಿದ್ದು, ಕಡಿಮೆ ಸಿಬ್ಬಂದಿಯಿಂದಲೇ ಕೋರ್ಟ್ ಕಲಾಪಗಳು ನಡೆದವು. ಈ ವಿಡಿಯೋ ಕಾನ್ಫರೆನ್ಸ್ ಅನ್ನು ಆ್ಯಪ್ ಮೂಲಕ ನಡೆಸಲಾಯ್ತು.
ಬಾಂಬೆ ಹೈಕೋರ್ಟ್ನಲ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ನಂತರ ಮಾತನಾಡಿದ ನ್ಯಾಯಮೂರ್ತಿ ಗೌತಮ್ ಪಟೇಲ್ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡಾ ತಮ್ಮ ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ಜೊತೆಗೆ ಕಡಿಮೆ ಸಿಬ್ಬಂದಿಯಿಂದ ಕೋರ್ಟ್ ಕಲಾಪ ನಡೆಯುತ್ತಿದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ ಎಂದು ಪರಿಸ್ಥಿತಿಯನ್ನು ಬಿಚ್ಚಿಟ್ಟರು.
ಬಾಂಬೆ ಹೈಕೋರ್ಟ್ ಮಧ್ಯಾಹ್ನ 12ರಿಂದ 2ಗಂಟೆಯವರೆಗೆ ವಿಚಾರಣೆ ನಡೆಸಿದೆ. ಇದಕ್ಕೂ ಮೊದಲು ಕೇರಳ ಹೈಕೋರ್ಟ್ ಈ ರೀತಿಯ ವಿಭಿನ್ನ ಪ್ರಯತ್ನ ಮಾಡಿ ಯಶಸ್ವಿಯಾಗಿತ್ತು.