ನವದೆಹಲಿ: ಪಾಲ್ಘರ್ ಗುಂಪು ಹತ್ಯೆ ಘಟನೆಯನ್ನು ಬಿಜೆಪಿ ರಾಜಕೀಯ ಮತ್ತು ಕೋಮುವಾದಿ ವಿಷಯವನ್ನಾಗಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.
'ದುರಂತವೆಂದರೆ, ಬಿಜೆಪಿ ಮತ್ತು ಒಂದು ಭಾಗದ ಮಾಧ್ಯಮಗಳು ಈ ಘಟನೆಯನ್ನು ಕೋಮುವಾದಿ ಪ್ರಚೋದನೆಗಳೊಂದಿಗೆ ಪ್ರದರ್ಶಿಸಲು ಪ್ರಯತ್ನಿಸುತ್ತಿವೆ. ರಾಜಕೀಯಗೊಳಿಸುವ ಈ ಪ್ರಯತ್ನಗಳು ಬಹಳ ನಾಚಿಕೆಗೇಡಿನ ಸಂಗತಿಯಾಗಿದೆ' ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಇಬ್ಬರು ಸಂತರು ಚಿಕ್ನೆ ಮಹಾರಾಜ್ ಕಲ್ಪವ್ರಕ್ಷಗಿರಿ (70), ಸುಶಿಲ್ಗಿರಿ ಮಹಾರಾಜ್ (35) ಮತ್ತು ಅವರ ಕಾರು ಚಾಲಕ ನಿಲೇಶ್ ತೆಲ್ಗಡೆ (30) ಪಾಲ್ಘರ್ ದಾಟುತ್ತಿದ್ದಾಗ ಗುಂಪೊಂದು ಅವರನ್ನು ಕಳ್ಳರು ಎಂಬ ಅನುಮಾನದಿಂದ ಕಾರಿನಿಂದ ಹೊರಗೆ ಎಳೆದೊಯ್ದು ಹೊಡೆದು ಸಾಯಿಸಿದ್ದಾರೆ. ಈ ಮೂವರು ಮುಂಬೈನ ಕಂಡಿವಲಿಯಿಂದ ಗುಜರಾತ್‌ಗೆ ಪ್ರಯಾಣಿಸುತ್ತಿದ್ದರು.
ಈ ಘಟನೆಯನ್ನು ಖಂಡಿಸುವುದಾಗಿ ಹೆಳಿದ ಸುರ್ಜೆವಾಲಾ ಇದನ್ನು ಅತ್ಯಂತ ದುರದೃಷ್ಟಕರ ಎಂದು ಕರೆದಿದ್ದಾರೆ. ನಮ್ಮ ಸುಸಂಸ್ಕೃತ ಸಮಾಜದಲ್ಲಿ ಹಿಂಸಾಚಾರಕ್ಕೆ ಸ್ಥಳವಿಲ್ಲ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಘಟನೆ ಬಗ್ಗೆ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ಎಫ್‌ಐಆರ್ ದಾಖಲಿಸಿಕೊಂಡಿದ್ದು 110 ಜನರನ್ನು ಬಂಧಿಸಿದೆ. ಡಿಜಿಪಿ ಅತುಲ್ ಕುಲಕರ್ಣಿ ನೇತೃತ್ವದಲ್ಲಿ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ಒತ್ತಾಯಿಸಿದ್ದಾರೆ.