ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ಮುಖಂಡ ಹತ್ಯೆ ಖಂಡಿಸಿ ಇಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ವೇಳೆ ಪೊಲೀಸರು ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಪ್ರತಿಭಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ತೇಜಸ್ವಿ ಸೂರ್ಯ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತೀಯ ಕಾನೂನು ಸುವ್ಯವಸ್ಥೆಯಲ್ಲಿ ಇಂದು ಕಪ್ಪು ದಿನ. ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಕಾನೂನಿನ ನಿಯಮ ಮರೆತು ಮಮತಾ ಬ್ಯಾನರ್ಜಿ ಸರ್ಕಾರ ಹಗಲು ಹೊತ್ತಿನಲ್ಲೇ ಕೊಲೆ ಮಾಡಿದೆ. ಭಾರತದ ಅತ್ಯಂತ ಭ್ರಷ್ಟ ಸರ್ಕಾರ ಪಶ್ಚಿಮ ಬಂಗಾಳದಲ್ಲಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಮಮತಾ ಬ್ಯಾನರ್ಜಿ ದುರಾಡಳಿತವೇ ಕಾರಣ ಎಂದಿದ್ದಾರೆ.
ನಿರುದ್ಯೋಗದ ವಿರುದ್ಧ ಧ್ವನಿ ಎತ್ತುವ ಯುವಕರನ್ನ ರಾಜಕೀಯವಾಗಿ ಹತ್ಯೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 120ಕ್ಕೂ ಹೆಚ್ಚು ಬಿಜೆಪಿ ಮತ್ತು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನ ರಾಜ್ಯದಲ್ಲಿ ಅನಾಗರಿಕ ಮತ್ತು ಹೀನ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ರಾಜ್ಯದಲ್ಲಿ ಇದು ನನ್ನ ಮೊದಲ ಪ್ರತಿಭಟನೆ. ನಾವು ಈ ಸರ್ಕಾರವನ್ನ ಹೊರಹಾಕುತ್ತೇವೆ ಎಂದು ತೇಜಸ್ವಿ ಸೂರ್ಯ ಗುಡುಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡ ಮನೀಷ್ ಶುಕ್ಲಾ ಹತ್ಯೆ ವಿಚಾರವಾಗಿ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು 'ನಬಣ್ಣ ಚಲೋ' ಪ್ರತಿಭಟನೆ ನಡೆಸಿದರು. ಅದು ಹಿಂಸಾಚಾರ ರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಅಶ್ರುವಾಯು - ಲಾಠಿ ಪ್ರಹಾರ ನಡೆಸಿರುವ ಘಟನೆ ಸಹ ನಡೆಯಿತು.