ರಾಂಚಿ: ಕೊರೊನಾ ನಿಯಮೋಲ್ಲಂಘನೆ ಕಾರಣಕ್ಕೆ ಉತ್ತರಪ್ರದೇಶದ ಉನ್ನಾವೋ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ಗೆ ಜಾರ್ಖಂಡ್ ಸರ್ಕಾರ 14 ದಿನಗಳ ಬಲವಂತದ ಕ್ವಾರಂಟೈನ್ ವಿಧಿಸಿದೆ.
ದನ್ಭಾದ್ನಿಂದ ದೆಹಲಿಗೆ ಆಗಮಿಸುತ್ತಿದ್ದ ವೇಳೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದು, ಹೀಗಾಗಿ ಇಲ್ಲಿನ ಶಾಂತಿ ಭವನ ಆಶ್ರಮದಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಾರ್ಖಂಡ್ ಸರ್ಕಾರಕ್ಕೆ ಯಾವುದೇ ರೀತಿಯ ಮಾಹಿತಿ ನೀಡದೇ ಪ್ರವಾಸ ಕೈಗೊಂಡಿದ್ದರಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಸಾಕ್ಷಿ ಮಹಾರಾಜ್ ಪ್ರತಿಕ್ರಿಯಿಸಿ, "ನಾನು ಭೇಟಿ ನೀಡುವುದಕ್ಕೂ ಮುಂಚಿತವಾಗಿ ರಾಜ್ಯ ಸರ್ಕಾರ ಸೇರಿದಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇನೆ. ಆದರೂ ನನ್ನನ್ನು ತಡೆಹಿಡಿದು, ಅಸಭ್ಯವಾಗಿ ವರ್ತಿಸಿ, ಬಲವಂತವಾಗಿ ಕ್ವಾರಂಟೈನ್ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.
ಜಾರ್ಖಂಡ್ನಲ್ಲಿ ಧನ್ಬಾದ್ನಲ್ಲಿರುವ ಶಾಂತಿ ಭವನ ಆಶ್ರಮ ಸಾಕ್ಷಿ ಮಹಾರಾಜ್ ಅವರಿಗೆ ಸೇರಿದೆ. ಇಲ್ಲಿ ತಮ್ಮ 97 ವರ್ಷದ ಅನಾರೋಗ್ಯಪೀಡಿತ ತಾಯಿ ಭೇಟಿಗಾಗಿ ಆಗಮಿಸಿದ್ದಾಗಿ ಅವರು ಹೇಳಿದ್ದಾರೆ. ಯಾವುದೇ ರೀತಿಯ ಸಾರ್ವಜನಿಕ ಸಭೆ ಅಥವಾ ಸಮಾರಂಭದಲ್ಲಿ ಭಾಗಿಯಾಗಲು ಬಂದಿಲ್ಲ. ಹೀಗಿದ್ದರೂ ಕಾರು ಬೆನ್ನತ್ತಿ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ ಎಂದು ದೂರಿದರು.