ಬರೇಲಿ(ಯುಪಿ): ಉತ್ತರಪ್ರದೇಶದ ಬರೇಲಿ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ವಿರುದ್ಧ ಆತನ ಮಗಳು ಗಂಭೀರ ಆರೋಪ ಮಾಡಿದ್ದು, ಕೆಳಜಾತಿಯ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಡಿಯೋದಲ್ಲಿ ದೂರಿದ್ದಾಳೆ.
ಶಾಸಕ ರಾಜೇಶ್ ಮಿಶ್ರಾ ಮಗಳಾಗಿರುವ ಸಾಕ್ಷಿ ಮಿಶ್ರಾ ಈ ಆರೋಪ ಮಾಡಿದ್ದು, ತಮಗೆ ಪೊಲೀಸ್ ರಕ್ಷಣೆ ಬೇಕಾಗಿದೆ ಎಂದು ವಿಡಿಯೋದಲ್ಲಿ ತಮ್ಮ ಅಳಲು ತೊಡಿಕೊಂಡಿದ್ದಾಳೆ.
ಏನಿದು ಘಟನೆ?
ಜುಲೈ 4ರಂದು ಸಾಕ್ಷಿ ಮಿಶ್ರಾ ಕುಟುಂಬಸ್ಥರ ವಿರೋಧದ ನಡುವೆ ದಲಿತ ಯುವಕ ಅಜಿತ್ ಕುಮಾರ್ ಜತೆ ಮದುವೆಯಾಗಿದ್ದಾಳೆ. ಇದಾದ ಬಳಿಕ ನಮಗೆ ಮೇಲಿಂದ ಮೇಲೆ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮ ತಂದೆಯ ಕಣ್ಣಿಗೆ ನಾವು ಕಾಣಿಸಿಕೊಂಡರೆ ಕೊಲೆ ಮಾಡುವ ಧಮ್ಕಿ ಹಾಕಿದ್ದಾರೆ. ಕೆಲ ಜನರನ್ನು ಬಿಟ್ಟು ನಮ್ಮನ್ನು ಹುಡುಕಾಡುತ್ತಿದ್ದು, ಒಂದು ವೇಳೆ ನಮಗೆ ಏನಾದರೂ ತೊಂದರೆ ಆದರೆ ಅದಕ್ಕೆ ನಮ್ಮ ತಂದೆ ನೇರ ಹೊಣೆ ಎಂದು ವಿಡಿಯೋದಲ್ಲಿ ತಮ್ಮ ಅಳಲು ತೊಡಿಕೊಂಡಿದ್ದಾರೆ.
ನಾವಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ನಮ್ಮ ತಂದೆ ತಮ್ಮ ವಿಚಾರ ಬದಲಿಸಿಕೊಂಡು ನಮಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ. ಒಂದು ವೇಳೆ ನಮಗೆ ಏನಾದರೂ ತೊಂದರೆ ಆದರೆ ಅದಕ್ಕೆ ನಮ್ಮ ತಂದೆ ನೇರ ಹೊಣೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.