ಇಂದೋರ್: ರಾಜ್ಯಸಭಾ ಸದ್ಯರಾಗಿ ಆಯ್ಕೆ ಆಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಇಂದೋರ್ನಲ್ಲಿ ಭರ್ಜರಿಯಾಗಿ ಸ್ವಾಗತ ಕೋರಲಾಯಿತು. ಈ ವೇಳೆ ನಡೆದ ಸಮಾರಂಭದಲ್ಲಿ ಕೋವಿಡ್ನ ಎಲ್ಲ ನಿಯಮಗಳನ್ನ ಗಾಳಿಗೆ ತೂರಲಾಗಿತ್ತು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಬಿಜೆಪಿ ನಾಯಕರು, ವಿಮಾನ ನಿಲ್ದಾಣದಲ್ಲಿ ಸಿಂಧಿಯಾ ಅವರನ್ನು ಸ್ವಾಗತಿಸುವಾಗ, ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿದ್ದರು. ಅಲ್ಲಿ ಯಾವುದೇ ಕೊರೊನಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿರಲಿಲ್ಲ. ತೀರಾ ಹತ್ತಿರದಲ್ಲಿ ನಿಂತು ಸಿಂಧಿಯಾಗೆ ಹೂ ಗುಚ್ಚಗಳನ್ನ ನೀಡಲಾಗಿದೆ. ಇದು ಫೋಟೊಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇವಲ ಮೂರು ದಿನಗಳ ಹಿಂದೆಯಷ್ಟೇ ಚೇತರಿಸಿಕೊಂಡಿದ್ದ ಸಚಿವ ತುಳಸಿ ಸಿಲಾವತ್ ಕೂಡಾ ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಕಡ್ಡಾಯವಾಗಿ ಒಂದು ವಾರಗಳ ಕಾಲ ಕ್ವಾರಂಟೈನ್ ಆಗಬೇಕಾಗಿರುವುದು ನಿಯಮ. ಆದರೆ ಈ ನಿಯಮಗಳನ್ನ ಸರ್ಕಾರದಲ್ಲಿರುವವರೇ ಉಲ್ಲಂಘಿಸಿದ್ದಾರೆ ಎಂದು ಕೈ ನಾಯಕರು ಆರೋಪಿಸಿದ್ದಾರೆ. ಆದರೆ, ಬಿಜೆಪಿ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದೆ. ಪಕ್ಷವು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ ಎಂದು ಸಮರ್ಥಿಸಿಕೊಂಡಿದೆ.
ಈ ನಡುವೆ ಜ್ಯೋತಿರಾದಿತ್ಯ ಸಿಂಧಿಯಾ ಸಚಿವರಾದ ಕಮಲ್ ಪಟೇಲ್ ಹಾಗೂ ಮೋಹನ್ ಯಾದವ್ ಅವರೊಂದಿಗೆ ಪಾಲ್ಗೊಂಡ ಪೂಜೆಯಲ್ಲೂ ಕೋವಿಡ್ ನಿಯಮಗಳನ್ನ ಉಲ್ಲಂಘಿಸಿರುವ ಆರೋಪ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.