ಬರೇಲಿ (ಉತ್ತರ ಪ್ರದೇಶ): ನಿನ್ನೆ ತಡರಾತ್ರಿ ಬರೇಲಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಮುಖಂಡ ಯೂನುಸ್ ಅಹ್ಮದ್ ಡಂಪಿಗೆ ನಾಲ್ವರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಯೂನುಸ್ ಅಹ್ಮದ್ ಡಂಪಿಗೆ ಅವರ ಮನೆಯ ಮುಂಭಾಗವೇ ಗುಂಡಿಕ್ಕಿ ಆರೋಪಿಗಳು ಪರಾರಿಯಾಗಿದ್ದಾರೆ. ಡಂಪಿ ಬರೇಲಿಯ ಬಿಜೆಪಿ ಅಲ್ಪಸಂಖ್ಯಾತರ ಉಪಾಧ್ಯಕ್ಷರಾಗಿದ್ದರು. ಭೂ ವಿವಾದಕ್ಕೆ ಸಂಬಂಧಿಸಿದಂತೆ ಸಿರಾಜುದ್ದೀನ್, ಇಸಾಮುದ್ದೀನ್ ಮತ್ತು ಆಸಿಫ್ ಎಂಬುವರು ಡಂಪಿಗೆ ಗುಂಡಿಕ್ಕಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಆ ಮೂವರು ಮತ್ತೋರ್ವನನ್ನು ಸೇರಿಸಿಕೊಂಡು ಡಂಪಿಗೆ ಗುಂಡಿಕ್ಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಷಯ ಇತರರಿಗೆ ತಿಳಿಯುವ ಮುನ್ನವೇ ಆರೋಪಿಗಳು ಪರಾರಿಯಾಗಿದ್ದು, ಗುಂಡು ತಗುಲಿದ ಕೂಡಲೇ ಡಂಪಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ. ಜಿಲ್ಲೆಯ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ.