ಮುಂಬೈ: ಆರ್ಎಸ್ಎಸ್, ಬಿಜೆಪಿಯವರು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಇನ್ನೊಬ್ಬರನ್ನು ನಾಶ ಮಾಡುವುದಕ್ಕೆ ನೋಡುತ್ತಿದ್ದಾರೆ. ಆದರೆ ನಾವು ಅಂಥವರ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ ಸರ್ಕಾರ ಅಥವಾ ಪಕ್ಷದ ರಕ್ಷಣೆಗೆ ಮಾತ್ರವಲ್ಲದೆ ದೇಶವನ್ನು ನಾವು ಬಿಜೆಪಿಯಿಂದ ರಕ್ಷಿಸಬೇಕಿದೆ. ಸಮಾಜದಲ್ಲಿ ಸಮಾನತೆ ಹಾಗೂ ಸಹಿಷ್ಣುತೆ ತರಲು ಕಾಂಗ್ರೆಸ್ ಮತ್ತೆ ಬರಬೇಕಿದೆ. ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದೆ. ಪ್ರಜಾಪ್ರಭುತ್ವದ ತಳಹದಿ ಮೇಲೆ ಕೆಲಸ ಮಾಡಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದ ತತ್ವಗಳು ಹಾಗೂ ಪಂಡಿತ್ ಜವಹರಲಾಲ್ ನೆಹರೂ ಹಾಕಿಕೊಟ್ಟ ರಾಜಕೀಯ ಸಿದ್ಧಾಂತಗಳ ಮೂಲಕ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸೋಣ ಎಂದರು.
ಕಾಂಗ್ರೆಸ್ ಶಾಸಕರು, ಸಂಸದರು, ಮಾಜಿ ಪ್ರಧಾನಿ, ಮಾಜಿ ಸಿಎಂ ಎಲ್ಲರೂ ಒಗ್ಗೂಡಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ಕೆಲಸ ಮಾಡಬೇಕು. ಇದು ನಾವು ಅಂದುಕೊಂಡಷ್ಟು ಸುಲಭವಲ್ಲ. ಬಹಳ ಕಠಿಣವಿದೆ. ಆದರೂ ಕೂಡಾ ನಾವು ಈ ಕೆಲಸವನ್ನು ಮಾಡಲೇಬೇಕು. ಬರಲಿರೋ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸೋಣ. ಬಿಜೆಪಿ ಮುಂದೆ ಸರ್ಕಾರ ರಚಿಸದಂತೆ ಮಾಡುವುದೇ ಇದರ ಮುಖ್ಯ ಉದ್ದೇಶ. ಬಿಜೆಪಿಯನ್ನು ರಾಜಕೀಯ ಸಿದ್ಧಾಂತದ ಮೂಲಕ ದೂರವಿಡೋಣ ಎಂದು ಖರ್ಗೆ ಕರೆ ನೀಡಿದರು.