ನವದೆಹಲಿ: ಲೋಕಸಭೆ ಚುನಾವಣೆಗೆ ಕಣಕ್ಕಿಳಿಯುವ 184 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಜೆಪಿ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪವಿತ್ರ ಕ್ಷೇತ್ರ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ.
ಇನ್ನು ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಗಾಂಧಿನಗರ ಲೋಕಸಭಾ ಕ್ಷೇತ್ರಕ್ಕೆ ಅಮಿತ್ ಶಾ ಸ್ಪರ್ಧೆಗೆ ಇಳಿಯಲಿದ್ದಾರೆ. ಈ ಮೂಲಕ ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಡ್ವಾಣಿ, ಗುವಾಹಟಿಯ ಬಿಜೋಯ್ ಚಕ್ರವರ್ತಿ ಸೇರಿ 75 ಹಿರಿಯ ನಾಯಕರಿಗೆ ಮೊದಲ ಪಟ್ಟಿಯಲ್ಲಿ ಕೇಸರಿ ಪಕ್ಷ ಜಾಗ ಕೊಟ್ಟಿಲ್ಲ.
ಲಕ್ನೋದಿಂದ ಗೃಹ ಸಚಿವ ರಾಜನಾಥ್ ಸಿಂಗ್, ರಾಹುಲ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಸಚಿವೆ ಸ್ಮೃತಿ ಇರಾನಿ ಕಣಕ್ಕಿಳಿಯವುದು ಖಚಿತವಾಗಿದೆ. ಉತ್ತರ ಪ್ರದೇಶ (28), ಕರ್ನಾಟಕದ (21), ತೆಲಂಗಾಣದ (10), ಅಸ್ಸೋಂ (8), ಆಂಧ್ರ ಪ್ರದೇಶ (2), ಜಮ್ಮು-ಕಾಶ್ಮೀರ (5), ಉತ್ತರಾಖಂಡ್ (5), ತಮಿಳುನಾಡು (5), ಬಿಹಾರ (17) ಸೇರಿ 20 ರಾಜ್ಯಗಳ 184 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಬಿಜೆಪಿ ಘೋಷಿಸಿದೆ.
ಶನಿವಾರ ಬೆಳಗ್ಗೆ ಮತ್ತೆ 36 ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲಿ ಆಂಧ್ರದ 23, ಮಹಾರಾಷ್ಟ್ರದ 6, ಓಡಿಸ್ಸಾದ 5 ಹಾಗೂ ಅಸ್ಸೋಂ, ಮೇಘಾಲಯದ ತಲಾ 1 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ.